ಶಿವಮೊಗ್ಗ : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ದಂಡ ಪಾವತಿಗೆ ರಾಜ್ಯ ಸರ್ಕಾರವು ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿದ್ದು, ಈ ಪ್ರಕರಣಗಳನ್ನು ಡಿಸೆಂಬರ್ 13 ರಂದು ನಡೆಯಲಿರುವ ಲೋಕ್ ಅದಾಲತ್ – ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಅವರು ತಿಳಿಸಿದ್ದಾರೆ.

ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿ, ದಂಡ ಪಾವತಿಸದೆ ಬಾಕಿ ಉಳಿದಿರುವ ಪ್ರಕರಣಗಳಿಗೆ ಹಾಗೂ 1990-91 ರಿಂದ 2019-20 ರವರೆಗಿನ ಅವಧಿಯಲ್ಲಿ ಆರ್‌ಟಿಓ (RTO) ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳಿಗೆ ಮಾತ್ರ ಈ ಶೇ. 50 ರಿಯಾಯಿತಿಯು ಅನ್ವಯವಾಗುತ್ತದೆ. ಸಾರ್ವಜನಿಕರು ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೂಡಲೇ ದಂಡ ಪಾವತಿಸಬೇಕು ಮತ್ತು ಮತ್ತೊಂದು ಅವಕಾಶಕ್ಕಾಗಿ ಕಾಯಬಾರದು ಎಂದು ಸಂತೋಷ್ ಎಂ.ಎಸ್. ಅವರು ಮನವಿ ಮಾಡಿದರು.
Traffic Fines ನಕಲಿ ಲಿಂಕ್‌ಗಳ ಬಗ್ಗೆ ಎಚ್ಚರಿಕೆಯಿಂದಿರಿ
ಜಿಲ್ಲೆಯಲ್ಲಿ ಸಂಚಾರಿ ದಂಡ ಪಾವತಿಗೆ ಯಾವುದೇ ಆನ್‌ಲೈನ್ ವ್ಯವಸ್ಥೆ ಅಥವಾ ಪಾವತಿ ಲಿಂಕ್ ಇರುವುದಿಲ್ಲ. ಹಾಗಾಗಿ, ಸಾರ್ವಜನಿಕರು ಯಾವುದೇ ಫೇಕ್ ಲಿಂಕ್‌ಗಳು ಅಥವಾ ನಕಲಿ ಸಂದೇಶಗಳಿಗೆ ಬಲಿಯಾಗಬಾರದು ಎಂದು ಅವರು ಎಚ್ಚರಿಸಿದರು. ಜೊತೆಗೆ, ವಾಹನ ಸಂಚಾರದ ವೇಳೆ ಯುವಜನತೆ ಸೇರಿದಂತೆ ಎಲ್ಲರೂ ಹೆಲ್ಮೆಟ್‌ನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಅವರು ಹೇಳಿದರು.
ವೃತ್ತ ನಿರೀಕ್ಷಕರಾದ ದೇವರಾಜ್ ಅವರು ಮಾಹಿತಿ ನೀಡಿ, ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳ ಬಾಕಿ ದಂಡವನ್ನು ಶೇ.50 ರಿಯಾಯಿತಿಯಲ್ಲಿ ಪಾವತಿಸಲು ಅವಕಾಶವಿದೆ. 2023ರ ಆಗಸ್ಟ್‌ನಿಂದ 2025ರ ನವೆಂಬರ್‌ವರೆಗೆ ಸ್ಮಾರ್ಟ್ ಸಿಟಿ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಿಂದ ಒಟ್ಟು 3,10,560 ಇ-ಚಲನ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು ರೂ. 22,77,61,750 ದಂಡ ವಿಧಿಸಲಾಗಿತ್ತು. ಈವರೆಗೆ 1,10,052 ಇ-ಚಲನ್ ಪ್ರಕರಣಗಳು ಮುಕ್ತಾಯಗೊಂಡಿದ್ದು, ರೂ. 6,43,70,500 ದಂಡ ವಸೂಲಾಗಿದೆ. ಇನ್ನೂ 2,00,508 ಇ-ಚಲನ್ ಪ್ರಕರಣಗಳು ಬಾಕಿ ಇದ್ದು, ಒಟ್ಟು ರೂ. 16,33,91,250 ದಂಡ ವಸೂಲಾತಿಗೆ ಉಳಿದಿದೆ ಎಂದು ಮಾಹಿತಿ ನೀಡಿದರು. ಕಳೆದ ಬಾರಿ ( 23-08-2025 ರಿಂದ 12-09-2025) ನೀಡಲಾಗಿದ್ದ ಶೇ.50 ರಿಯಾಯಿತಿಯಲ್ಲಿ ಸಾರ್ವಜನಿಕರು ಒಟ್ಟು 50,451 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. 2,09,41,750 ದಂಡ ಪಾವತಿಸಿದ್ದರು ಎಂದರು.
ಇ-ಚಲನ್ ದಂಡವನ್ನು ಪಾವತಿಸಲು ಸಾರ್ವಜನಿಕರಿಗೆ ಆನ್‌ಲೈನ್ ವ್ಯವಸ್ಥೆ ಇರುವುದಿಲ್ಲ. ಬದಲಾಗಿ, ಪೂರ್ವ ಸಂಚಾರ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ಭದ್ರಾವತಿ ಸಂಚಾರ ಪೊಲೀಸ್ ಠಾಣೆ, ಅಶೋಕ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ಗೋಪಿ ಸರ್ಕಲ್ ಮತ್ತು ಪೊಲೀಸ್ ಚೌಕಿ ಸರ್ಕಲ್‌ಗಳಲ್ಲಿ ಇರುವ ಪೊಲೀಸ್ ಕಿಯಾಸ್ಕ್ಗಳಲ್ಲಿ ಹಾಗೂ ಕರ್ತವ್ಯದಲ್ಲಿರುವ ಇ-ಚಲನ್ ಮಷೀನ್ ಹೊಂದಿರುವ ಎಎಸ್‌ಐ ಮತ್ತು ಮೇಲ್ಪಟ್ಟ ಶಿವಮೊಗ್ಗ ಸಂಚಾರ ಠಾಣೆಯ ಪೊಲೀಸ್ ಅಧಿಕಾರಿಗಳ ಬಳಿ ದಂಡ ಪಾವತಿಸಬಹುದಾಗಿದೆ.
Traffic Fines ಆರ್‌ಟಿಓ ಪ್ರಕರಣಗಳಿಗೂ ರಿಯಾಯಿತಿ
ಆರ್‌ಟಿಓ ಅಧಿಕಾರಿ ಮುರುಗೇಂದ್ರ ಬಿ. ಶಿರೋಲ್ಕರ್ ಅವರು ಮಾತನಾಡಿ, ಸರ್ಕಾರವು ಮೊದಲ ಬಾರಿಗೆ ಸಾರಿಗೆ ಇಲಾಖೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ.50 ರಷ್ಟು ದಂಡ ಪಾವತಿಸಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಿದೆ ಎಂದರು. 1990-91 ರಿಂದ 2019-20 ರೊಳಗೆ ಆರ್‌ಟಿಓ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗುತ್ತದೆ. ಶಿವಮೊಗ್ಗ ಆರ್‌ಟಿಓ ವ್ಯಾಪ್ತಿಯಲ್ಲಿ 790 ಪ್ರಕರಣಗಳು ಮತ್ತು ಸಾಗರ ಎಆರ್‌ಟಿಓ ವ್ಯಾಪ್ತಿಯಲ್ಲಿ 523 ಪ್ರಕರಣಗಳಲ್ಲಿ ದಂಡ ಬಾಕಿ ಇದೆ. ಸಂಬಂಧಪಟ್ಟ ವಾಹನ ಮಾಲೀಕರು ಡಿಸೆಂಬರ್ 12 ರೊಳಗೆ ಈ ಅವಕಾಶ ಬಳಸಿಕೊಂಡು ದಂಡ ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕು ಎಂದರು.
Traffic Fines Lok Adalat to Clear E Challans


