ತೀರ್ಥಹಳ್ಳಿ: ಹೋಯ್ ಎಳ್ಳಮಾಸ್ಯೆ ಜಾತ್ರೆ ಯಾವಗಂತೋ, ಲಾಸ್ಟ್ ದಿನ ತೆಪ್ಪೋತ್ಸವ ಅಲ್ನ, ಅವತ್ ಕಾಲಿಡಕ್ ಜಾಗ ಇರಲ್ಲ. ಫಸ್ಟ್ನೆ ದಿನನೆ ಹೋಗಣ ಅತ್ಲಗೆ, ಜನ್ರು ಕೈಕಾಲಾಲಿಡಿ ಎಂತಹಾ ಬಿಳೋದ್ ಹೇಳು. ಇದು ಮಲೆನಾಡಿನ ಬಾಗದಲ್ಲಿ ತೀರ್ಥಹಳ್ಳಿ ಎಳ್ಳಮಾಸ್ಯೆ ಜಾತ್ರೆಯ ಟೈಮಲ್ಲಿ ಕೇಳಿ ಬರೋ ಮಾತ್ ಕಂಡ್ರಿ. ಈಗ ಆ ವಿಚಾರ ಎಂತಕ್ ಅಂತ ಕೇಳುದ್ರೆ. ವಿಷಯ ಇದೇ ಕಂಡ್ರಿ, ಅದೇನಂದ್ರೆ ಈ ಸತಿ ಎಳ್ಳಮಾಸ್ಯೆ ಜಾತ್ರೆ ಯಾವಾಗ ಅಂತ ಹೇಳೋ ವಿಚಾರ.

ಹೌದು, ಯಾವಾಗ್ಲೂ ಬರೋ ಹಂಗೆ ಈ ಸತಿನೂ ಎಳ್ಳಮಾಸ್ಯೆ ಜಾತ್ರೆ ಡಿಸೆಂಬರ್‌ಲ್ಲೇ ಬಂದ್ಯದೆ. ಅದು ಯಾವತ್ತಂದ್ರೆ ಡಿಸೆಂಬರ್ 19, 20, 21 ಕಂಡ್ರಿ. ಚೂರ್ ಬೇಗನೆ ಬಂದ್ಯದೆ. ಚಳಿ ಜಾಸ್ತಿ ಹಂಗಂತ ಹೋಗೊದ್ ಬಿಡಲ್ಲ. ಒಂದ್ ಮಂಕಿ ಟೊಪ್ಪಿ ಹಾಕಂಡು, ಜರ್ಕಿ ಹಾಕೋಂಡ್ ಬಿರ್ರನೆ ಹೋಗಿ ಬರೋದು. ಯಾವಾಗ್ಲೂ ಇರೋಹಂಗೆ ಈ ಸತಿನು ಬಾಳಾ ಗೌಜ್ ಗಮ್ಮತ್ ಉಂಟ್ ಕಂಡ್ರಿ. ಮೂರ್ ದಿನನೂ ತುಂಬಾ ಕಾರ್ಯಕ್ರಮ.
ಕಾರ್ಯಕ್ರಮದ್ ಬಗ್ಗೆ ತಿಳ್ಕಣ ಅಂತ ಎಳ್ಳಮಾಸ್ಯೆ ಜಾತ್ರೆ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಅವರಿಗೆ ಫೋನ್ ಮಾಡುದ್ವಿ. ಅವ್ರ ಎಂಥ ಅಂದ್ರು ಗೊತ್ತಾ..ಈಸತಿನು ಮೂರ್ ದಿನ ಬಾಳಾ ಗೌಜ್ಯಿಂದ ಎಳ್ಳಮಾಸ್ಯೆ ಜಾತ್ರೆ ನಡೀತಾ ಅದೆ. ಡಿಸೆಂಬರ್ 19 ಕ್ಕೆ ತೀರ್ಥಸ್ನಾನ, ಡಿಸೆಂಬರ್ 20 ರಥೋತ್ಸವ, ಡಿಸೆಂಬರ್ 21 ಕ್ಕೆ ತೆಪ್ಪೋತ್ಸವ ನಡಿತದೆ. ಜಾತ್ರೆಗೆ ಸುಮಾರು 20 ರಿಂದ 25 ಲಕ್ಷ ಖರ್ಚು ಬರ್ತಾದೆ. ಪ್ರತಿದಿನ 40 ರಿಂದ 50 ಸಾವಿರ ಜನ ಜಾತ್ರೆಗೆ ಬರ್ತಾರೆ. ತೆಪ್ಪೋತ್ಸವದ ದಿನ ಒಂದೂವರೆ ಲಕ್ಷದಿಂದ 2 ಲಕ್ಷ ಜನ ಸೇರ್ಬೋದು. ರಾಮೇಶ್ವರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ನಡಿತದೆ ಅಂದ್ರು.

ಎಂತದೆ ಆಗ್ಲಿ ಮಾರಾಯ, ತೀರ್ಥಹಳ್ಳಿಯ ರಾಮೇಶ್ವರ ದೇವರ ಎಳ್ಳಮಾಸ್ಯೆ ಜಾತ್ರೆ ಅಂದ್ರೆ ಓಂತಾರ ಖುಶಿ. ಆ ರಾಮ ಕೊಂಡದಲ್ಲಿ ಈ ಚಳಿಲಿ ಜನ ಮುಳಗಿ ಏಳೋದು. ಕುವೆಂಪು ಸೇತುವೆನ ಸಿಂಗಾರ ಮಾಡೋದನ್ನ ನೋಡೋದು. ಆಕಾಶದ್ ಮೇಲ್ಗಡೆ ಸಿಡಿಯೋ ಪಟಾಕಿನ ನೋಡೋಕಂತಾನೆ ಹೋಗೋದು, ಇದೆಲ್ಲಾ ಓಂತರಾ ಖುಷಿ.
Thirthahalli Ellamavasya Jathre Dates Announced


