ಶಿವಮೊಗ್ಗ ನಗರದಲ್ಲಿಂದು ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವುದು ವರದಿಯಾಗಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಡೀನ್ ಡಾ. ವಿರುಪಾಕ್ಷಪ್ಪ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಈ ದಾಳಿ ನಡೆದಿದೆ.

ಆದಾಯದ ಮೂಲಗಳಿಗೆ ಮೀರಿದ ಅಕ್ರಮ ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಲೋಕಾಯುಕ್ತ ಎಸ್.ಪಿ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತಂಡಗಳು ರಚನೆಯಾಗಿದ್ದು, ಅವು ಏಕಕಾಲಕ್ಕೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯವನ್ನು ಆರಂಭಿಸಿವೆ.
ಮೆಡಿಕಲ್ ಕಾಲೇಜಿನ ಕ್ವಾರ್ಟರ್ಸ್, ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಲಕ್ಷ್ಮೀಪತಿ ಅವರ ಸ್ವಂತ ನಿವಾಸ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿರುವ ಮನೆ ಸೇರಿದಂತೆ ಒಟ್ಟು ನಾಲ್ಕು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದು, ಸಂಪೂರ್ಣ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
lokayukta Raids SIMS Dean’s Personal Assistant


