ಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ‘ಪ್ರವಾಸಿ ತಾಣ’ ಮಾನ್ಯತೆಯ ಮುದ್ರೆ!

prathapa thirthahalli
Prathapa thirthahalli - content producer

Sigandur Chowdeshwari Temple : ನವೆಂಬರ್ 18, 2025, ಸಾಗರ: ಮಲೆನಾಡು ಟುಡೆ ಸುದ್ದಿ ಶರಾವತಿ ನದಿಯ ಹಿನ್ನೀರಿನ ತಟದಲ್ಲಿ ನೆಲೆಸಿರುವ ಪ್ರಖ್ಯಾತ ಧಾರ್ಮಿಕ ಕೇಂದ್ರವಾದ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಇದೀಗ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ‘ಪ್ರವಾಸಿ ತಾಣ’ ಮಾನ್ಯತೆಯ ಮುದ್ರೆ ಲಭಿಸಿದೆ.

ರಾಜ್ಯ ಸರ್ಕಾರವು ಪ್ರಕಟಿಸಿದ 2024–29ನೇ ಸಾಲಿನ ಪ್ರವಾಸೋದ್ಯಮ ನೀತಿಯ ಅಡಿಯಲ್ಲಿ ಜಿಲ್ಲಾವಾರು ಪ್ರವಾಸಿ ತಾಣಗಳಿಗೆ ಅನುಮೋದನೆ ದೊರೆತಿದ್ದು, ಈ ಪಟ್ಟಿಯಲ್ಲಿ ಸಾಗರ ತಾಲ್ಲೂಕಿನ ಒಟ್ಟು 15 ಸ್ಥಳಗಳು ಸೇರ್ಪಡೆಯಾಗಿವೆ. ಈ ಮೂಲಕ ಸಾಗರ ತಾಲ್ಲೂಕಿನಲ್ಲಿ ಪ್ರವಾಸಿ ಆಕರ್ಷಣೆಯ ತಾಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದಂತಾಗಿದೆ. ಈಗ ಹೊಸದಾಗಿ ಸೇರ್ಪಡೆಯಾಗಿರುವ ಪ್ರವಾಸಿ ತಾಣಗಳಲ್ಲಿ ದೇವಾಲಯಗಳ ಸಂಖ್ಯೆಯೇ ಅಧಿಕವಾಗಿದ್ದು, ಸಮೀಪದ ಕೋಗಾರು ಭೀಮೇಶ್ವರ ದೇವಸ್ಥಾನವೂ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಶರಾವತಿ ಹಿನ್ನೀರಿನ ಪ್ರದೇಶದ ವಿಶೇಷ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ಪ್ರಯತ್ನವನ್ನು ಕೈಗೊಳ್ಳಲಾಗಿದೆ. 

Sigandur Chowdeshwari Temple
Sigandur Chowdeshwari Temple

Sigandur Chowdeshwari Temple ಕಳೆದ 20 ವರ್ಷಗಳಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇಗುಲಗಳ ಸಾಲಿನಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯವು ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಿದಾಗಿನಿಂದ ಇಲ್ಲಿಗೆ ಬರುವ ಮಹಿಳಾ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ದೇವಾಲಯವು ತನ್ನದೇ ಆದ ವಿಶಿಷ್ಟ ಧಾರ್ಮಿಕ ನಂಬಿಕೆಗಳು, ಇತಿಹಾಸದ ಮಹತ್ವ ಮತ್ತು ಭಾವೈಕ್ಯದ ಸಂಕೇತವಾಗಿ ಹೆಸರುವಾಸಿಯಾಗಿದ್ದು, ರಾಜ್ಯದಾದ್ಯಂತ ಭಕ್ತರು ಆಗಮಿಸಿ ಆಧ್ಯಾತ್ಮಿಕ ಪ್ರವಾಸವನ್ನು ಆನಂದಿಸುತ್ತಾರೆ. ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸಿಗಂದೂರು ಚೌಡೇಶ್ವರಿ ಸೇತುವೆಯು ಲೋಕಾರ್ಪಣೆಗೊಂಡ ನಂತರ, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ. ದೇಶದ ಎರಡನೇ ಅತಿ ಉದ್ದದ ತೂಗುಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸೇತುವೆಯು ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆದಿದೆ. 

SUNCONTROL_FINAL-scaled

ಇದರ ಪರಿಣಾಮವಾಗಿ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸಿ ಸೇತುವೆಯ ಮೇಲೆ ಫೋಟೊ ಮತ್ತು ಸೆಲ್ಫಿಗಳನ್ನು ತೆಗೆದುಕೊಂಡು ಸಂತೋಷ ಪಡುತ್ತಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿಯು ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಕಲ್ಪಿಸಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಈ ಪ್ರವಾಸಿ ತಾಣವು ಉತ್ತಮ ಸಾರಿಗೆ ವ್ಯವಸ್ಥೆ ಹೊಂದಿದೆ. ಸಾಗರದವರೆಗೆ ರೈಲು ಮತ್ತು ರಸ್ತೆ ಸಂಪರ್ಕವಿದ್ದು, ದೇವಸ್ಥಾನದವರೆಗೂ ಸುಸಜ್ಜಿತ ರಸ್ತೆ ಸಂಪರ್ಕವಿದೆ. ಈಗಾಗಲೇ ಸಾಗರ, ಮರಕುಟಕ (ಕೊಲ್ಲೂರು) ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 369 ‘ಇ’ ಹಾಗೂ ರಾಣೇಬೆನ್ನೂರು, ಬೈಂದೂರು ರಾಷ್ಟ್ರೀಯ ಹೆದ್ದಾರಿ 766 ‘ಸಿ’ ಮಾರ್ಗವು ಪ್ರವಾಸಿಗರಿಗೆ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಿದೆ. ಶರಾವತಿ ಹಿನ್ನೀರಿನಲ್ಲಿರುವ ಮುಪ್ಪಾನೆ ಮತ್ತು ಹಸಿರು ಮಕ್ಕಿ ಲಾಂಚ್‌ಗಳು ಸಹ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿವೆ. ಸ್ಥಳೀಯ ಆರ್ಥಿಕ ಪ್ರಗತಿಗೆ ಈ ಪ್ರವಾಸಿ ತಾಣದ ಮಾನ್ಯತೆ ಸಹಕಾರಿಯಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಸೇತುವೆ ಉದ್ಘಾಟನೆಯ ನಂತರ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ, ದೇವಸ್ಥಾನ ಆಡಳಿತ ಮಂಡಳಿಯು ದೇವಿಯ ದರ್ಶನ ಸಮಯವನ್ನು ವಿಸ್ತರಿಸಿದೆ. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 9 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ, ಭಕ್ತರಿಗೆ ರಾತ್ರಿ 9.30 ರವರೆಗೂ ಅನ್ನ ಪ್ರಸಾದ ವಿನಿಯೋಗವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.

SUNCONTROL_FINAL-scaled

Sigandur Chowdeshwari Temple Declared Tourist Spot

Sigandur Chowdeshwari Temple
Sigandur Chowdeshwari Temple
Share This Article