Shivamogga | Jan 30, 2024 | ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆ ಭದ್ರಾವತಿ ಶಾಸಕ ಸಂಗಮೇಶ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಸ್ಥಾನ ಲಭಿಸಿದೆ. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತಕ್ಕೆ ಶಿವಮೊಗ್ಗ ಜಿಲ್ಲೆ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರನ್ನ ನೇಮಿಸಲಾಗಿದೆ.ಇತ್ತ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಗೆ ನಿರೀಕ್ಷೆಯಂತೆಯೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಇದಿಷ್ಟೆ ಅಲ್ಲದೆ ಶಿವಮೊಗ್ಗದಲ್ಲಿ ಕಾರ್ಯಕರ್ತರ ಕೋಟದಲ್ಲಿ ಜಿ.ಪಲ್ಲವಿ, ಹೆಚ್.ಎಸ್.ಸುಂದರೇಶ್ ಹಾಗೂ ಆರ್.ಎಂ.ಮಂಜುನಾಥ್ ಗೌಡರಿಗೆ ಸ್ಥಾನಮಾನ ಸಿಗಲಿದೆ ಎಂದು ಮಲೆನಾಡು ಟುಡೆ ಖಚಿತ ಮೂಲಗಳ ವರದಿಯನ್ನ ಪ್ರಸಾರ ಮಾಡಿತ್ತು. ಇದೀಗ ವರದಿ ನಿಜವಾಗುತ್ತಿದ್ದು, ಇವತ್ತಿನ ರಾಜ್ಯ ಮಾಧ್ಯಮಗಳಲ್ಲಿ 34 ಕಾರ್ಯಕರ್ತರ ಹೆಸರುಗಳು ಪ್ರಕಟಗೊಂಡಿವೆ. ಅಧಿಕೃತವಾಗಿ ಪಟ್ಟಿ ಘೋಷಣೆಯಾಗದಿದ್ದರೂ, ಮಾಧ್ಯಮಗಳಿಗೆ ಹೆಸರು ಲೀಕ್ ಆಗಿದ್ದು ಕೊನೆ ಕ್ಷಣದ ಬದಲಾವಣೆಯ ಹೊರತುಪಡಿಸಿ ಎಲ್ಲರಿಗೂ ಸ್ಥಾನ ಖಚಿತವಾಗುವ ಸಾಧ್ಯತೆ ಇದೆ. ಅಂದಹಾಗೆ ಈ ಪಟ್ಟಿಯಲ್ಲಿ ಶಿವಮೊಗ್ಗದ ಮೂವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭ್ಯವಾಗುವ ನಿರೀಕ್ಷೆಯಿದೆ.
