ತುಂಗಾಪಾನಕ್ಕೆ ಸದ್ಯಕ್ಕಿಲ್ಲ ಬರ! ಗಾಜನೂರು ಡ್ಯಾಂ ಭರ್ತಿಗೆ ಜಸ್ಟ್ 3 ಅಡಿ ಬಾಕಿ! ಸಾರ್ವಜನಿಕರಿಗೆ ಎಚ್ಚರಿಕೆ!

Malenadu Today

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS 

ಶಿವಮೊಗ್ಗದ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಮಲೆನಾಡ ಮೊದಲ ಮಳೆಗೆ ನಿರೀಕ್ಷೆಯಂತೆಯೇ ಮೈದುಂಬಿಗೊಂಡಿದೆ. ಇವತ್ತು ಮಳೆ ಯಥಾಸ್ತಿತಿಯಲ್ಲಿ ಸುರಿದರೇ, ಸಂಜೆ ಹೊತ್ತಿಗೆ ಡ್ಯಾಂ ಗೇಟ್​ಗಳನ್ನ ತೆಗೆದು ಹೊಳೆಗೆ ನೀರು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕಟಣೆಯನ್ನು ಸಹ ಹೊರಡಿಸಲಾಗಿದೆ. 

Malenadu Today

ಸಾರ್ವಜನಿಕರಿಗೆ ಎಚ್ಚರಿಕೆ

ತುಂಗಾ ಜಲಾಶಯದಲ್ಲಿ (Tunga Dam) ಪೂರ್ಣ  ಮಟ್ಟ ತುಂಬಲು ಇನ್ನೂ ಕೇವಲ ಮೂರು ಅಡಿ ಬಾಕಿ ಇದೆ ಎಂದು ಇವತ್ತು ಬೆಳಗಿನ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಜಲಾನಯನ ಪ್ರದೇಶದಲ್ಲಿ  ಇನ್ನಷ್ಟು  ಮಳೆಯಾದರೆ ಜಲಾಶಯದ ಗೇಟುಗಳನ್ನು ತೆರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವುದೇ ಸಂದರ್ಭದಲ್ಲಿಯಾದರೂ ನದಿಗೆ ನೀರನ್ನು ಬಿಡುವ ಸಂಭವವಿರುತ್ತದೆ. ಆದ್ದರಿಂದ ಡ್ಯಾಂ ಕೆಳಭಾಗ ನದಿ ಪಾತ್ರದ  ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ದನಕರುಗಳನ್ನು, ನದಿಗೆ ಬಿಡಬಾರದು ಎಂದು ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಎಚ್ಚರಿಸಲಾಗಿದೆ. ತುಂಗಾ ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಜನರಿಗೆ ನದಿಪಾತ್ರದಲ್ಲಿ ಹಾಗೂ ತಗ್ಗುಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ಮಾಡದಿರುವಂತೆ ಸೂಚಿಸಲಾಗಿದೆ. 

Malenadu Today

ನೀರಿನ ಸಂಗ್ರಹ

ಪ್ರಸ್ತುತ ಡ್ಯಾಂನಲ್ಲಿ ಇವತ್ತು ನೀರಿನ ಮಟ್ಟ 587.54 ಅಡಿಗೆ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ನೀರಿನ ಮಟ್ಟ ಸುಮಾರು ಒಂದು ಅಡಿಯಷ್ಟು ಏರಿಕೆ ಕಂಡಿದೆ.  ಒಳ ಹರಿವು 4830 ಕ್ಯೂಸೆಕ್‌ನಷ್ಟಿದೆ. ತುಂಗಾ ಜಲಾಶಯವು 2.848 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 2.019 ಟಿಎಂಸಿ ನೀರಿನ ಸಂಗ್ರಹ ಹೊಂದಿದೆ. 

Malenadu Today

ಕಾಫಿನಾಡಿನಲ್ಲಿ ಮಳೆ

ನಿನ್ನೆಯ ಮಲ್ನಾಡ್ ಮಳೆ ಮೈಗೂಡಿಕೊಂಡಿದ್ದು, ಮನೆಗಳಲ್ಲಿ ಚಳಿ ಮಡುಗಟ್ಟುತ್ತಿದೆ. ಅದರಲ್ಲಿಯು ಕಾಫಿನಾಡಿನ ಶೃಂಗೇರಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ತುಂಗೆಗೆ ಭರಪೂರ ಕೆಂಪು ನೀರು ಹರಿದು ಬರುತ್ತಿದೆ. ಇತ್ತ ತೀರ್ಥಹಳ್ಳಿಯಲ್ಲಿಯು ಉತ್ತಮ ಮಳೆಯಾಗುತ್ತಿರುವುದರಿಂದ ತುಂಗೆಯಲ್ಲಿ ನೀರಿನ ಹರಿವು ವೇಗ ಪಡೆದುಕೊಂಡಿದೆ. 

Malenadu Today

ಕುಡಿಯುವ ನೀರಿಗಿಲ್ಲ ಸದ್ಯಕ್ಕೆ ಬರ

ಶಿವಮೊಗ್ಗ ನಗರವೂ ಸೇರಿದಂತೆ ತುಂಗೆಯನ್ನ ನಂಬಿಕೊಂಡ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿತ್ತು. ಮಳೆಯಾಗದಿದ್ದರೇ 2  ದಿನಕ್ಕೊಮ್ಮೆ ನೀರುಬಿಡಬೇಕಾದ ಸನ್ನಿವೇಶವಿತ್ತು. ಈ ಚರ್ಚೆಗಳ ನಡುವೆ ಮಳೆರಾಯ ಕೃಪೆ ತೋರಿದ್ದಾನೆ. ತುಂಗೆ ಗಾಜನೂರಿನಲ್ಲಿ ಭರ್ತಿಯಾಗುತ್ತಿದ್ದಾಳೆ. ಹಾಗಾಗಿ ಸದ್ಯದ ಮಟ್ಟಿಗೆ ತುಂಗಾಪಾನಕ್ಕಿಲ್ಲ ಅಡ್ಡಿ..   

 

Share This Article