ಮಧು ಬಂಗಾರಪ್ಪ ಅಸಮಾಧಾನ! ಸೊರಬ ಶಾಸಕರ ಪರವಾಗಿ ನಿಂತರಾ ಶಿವಣ್ಣ!

Malenadu Today

KARNATAKA NEWS/ ONLINE / Malenadu today/ May 22, 2023 SHIVAMOGGA NEWS

ಶಿವಮೊಗ್ಗ/ ಬೆಂಗಳೂರು/ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ಸಿಗಲಿಲ್ಲ ಅಂತಾ ಸೊರಬ ಶಾಸಕ ಮಧು ಬಂಗಾರಪ್ಪ ಬೇಸರಗೊಂಡಿದ್ಧಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಸಮಾರಂಭಕ್ಕೂ ಸಹ ಗೈರಾಗಿದ್ದರು ಎಂಬ ಸುದ್ದಿ ದಟ್ಟವಾಗುತ್ತಿದೆ.  ಇನ್ನೂ ಮಧು ಬಂಗಾರಪ್ಪರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ಒತ್ತಡವೂ ಹೆಚ್ಚಾಗುತ್ತಿದೆ. ಈ ಮಧ್ಯೆ  ನಟ ಶಿವರಾಜ ಕುಮಾರ್ ಹಾಗೂ ಗೀತಾ ಶಿವರಾಜ್​ ಕುಮಾರ್ ದಂಪತಿ ಸಹ ಮಧು ಬಂಗಾರಪ್ಪರಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. 

ಒಂದು ಕಡೆ ಮಧು ಬಂಗಾರಪ್ಪರವರು ಕಾಂಗ್ರೆಸ್​ ಪಕ್ಷದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜೆಡಿಎಸ್​ ಬಿಟ್ಟು ಕಾಂಗ್ರೆಸ್ ಸೇರಿದ್ದ ಮಧು ಬಂಗಾರಪ್ಪರವರಿಗೆ  ಶಿವರಾಜಕುಮಾರ್​ ರವರ ಬೆಂಬಲ ಸಹ ಸಿಕ್ಕಿತ್ತು. ಮಧು ಬಂಗಾರಪ್ಪರವರೊಬ್ಬರ ಪರವಾಗಿ ಪ್ರಚಾರ ನಡೆಸದೇ, ಮಧು ಬಂಗಾರಪ್ಪರವರು ಹೇಳಿದವರ ಪರವಾಗಿಯು ಶಿವಣ್ಣ ಪ್ರಚಾರ ಮಾಡಿದ್ದರು. ಪಕ್ಷಕ್ಕಾಗಿ ಶ್ರಮಿಸಿದರೂ ಆರಂಭದಲ್ಲಿಯೇ ಸಚಿವ ಸ್ಥಾನ ನೀಡಿಲ್ಲ ಎಂಬುದು ಮಧು ಬಂಗಾರಪ್ಪರವರ ಬಳಗದಲ್ಲಿರುವ ಬೇಸರವಾಗಿದೆ.   

 ಮಧು ಬಂಗಾರಪ್ಪರವರಿಗೆ ಸಚಿವ ಸ್ಥಾನ ನೀಡುವಂತೆ  ಶಿವಣ್ಣರ ಮೂಲಕವೇ ಕಾಂಗ್ರೆಸ್​ನಲ್ಲಿ ಹೆಚ್ಚಿನ ಒತ್ತಡ ಹೇರಲಾಗುತ್ತಿದೆ ಎಂಬ ಅಂಶಗಳು ಸಹ ಬೆಂಗಳೂರಿನ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಬಿಜೆಪಿಯಿಂದ ಆಫರ್ ಬಂದಿತ್ತು ಎಂದ ಭದ್ರಾವತಿ ಶಾಸಕ!ಸಚಿವ ಸ್ಥಾನಕ್ಕಾಗಿ ಬಿ.ಕೆ. ಸಂಗಮೇಶ್​ ಹೊಸ ದಾಳ!

ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಸಂಪುಟ ಸ್ಥಾನಕ್ಕಾಗಿ ಶಿವಮೊಗ್ಗದ ಮೂವರು ಶಾಸಕರು ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಬಹಿರಂಗ ಅಸಮಾಧಾನವನ್ನು ಹೊರಹಾಕುತ್ತಿರುವ ಶಾಸಕರ ಪೈಕಿ, ಶಿವಮೊಗ್ಗ ಜಿಲ್ಲೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​ ಹೊಸ ಬಾಂಬ್ ಸಿಡಿಸಿದ್ದಾರೆ. 

ಬಿಜೆಪಿಯಿಂದ ಬಂದಿತ್ತು ಕೋಟಿ ಆಫರ್​

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಾಲ್ಕನೇ‌ ಸಲ ಗೆದ್ದಿದ್ದೇನೆ,ಕಾಗೋಡು ತಿಮ್ಮಪ್ಪ ನಂತರ ನಾನೇ ಇಷ್ಟೊಂದು ಸಲ ಜಯ ಗಳಿಸಿರೋದು. ಸ್ವಾತಂತ್ರ್ಯ ಬಂದಾಗಿನಿಂದ ಭದ್ರಾವತಿಯ ಯಾರಿಗೂ ಸಚಿವ ಸ್ಥಾನ ಸಿಗಲಿಲ್ಲ. ಈ ಸಲ ನನಗೆ ಸಿಗಬೇಕಿದೆ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಬಿಕೆ ಸಂಗಮೇಶ್ವರ್​ ಅಭಿಪ್ರಾಯ ಪಟ್ಟಿದ್ದಾರೆ. 

ಈ ನಡುವೆ ತಮಗೆ ಬಿಜೆಪಿಯಿಂದ ಸಾಕಷ್ಟು ಆಫರ್​​ಗಳು ಬಂದಿತ್ತು  ಎನ್ನುವ ಮೂಲಕ , ಈ ಹಿಂದೆ ಶಿವಮೊಗ್ಗದಲ್ಲಿ ಕೇಳಿಬಂದಿದ್ದ ವದಂತಿಗಳನ್ನು ಸತ್ಯ ಎಂದು ಸಾಕ್ಷಿಕರಿಸಿದ್ರು. ಬಿಜೆಪಿಯಿಂದ ಸಾಲು ಸಾಲು ಆಫರ್​ ಬಂದರೂ ನಾನು ಪಕ್ಷ ಬಿಟ್ಟಿಲ್ಲ. ನನ್ನನ್ನ ಗೆಲ್ಲಿಸಿ ಎಂದು ಮನವಿ ಮಾಡಿದ್ದಕ್ಕೆ ಜನರು ಮತ ಹಾಕಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ನಾನು ಗೆದ್ದಿದ್ದೇನೆ. ಸಚಿವ ಸ್ಥಾನದ ಜೊತೆ , ಉಸ್ತುವಾರಿ ಸ್ಥಾನ ನೀಡಬೆಕು ಎಂದು ಮನವಿ ಮಾಡುತ್ತೇನೆ ಎಂದಿದ್ಧಾರೆ.  

ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಸಚಿವ ಸ್ಥಾನ ಕೇಳುತ್ತಿರುವ ವಿಚಾರ, ಅವರಿಗೆ  ಅವರಿಗೆ ಬಿಟ್ಟ ವಿಚಾರ. ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ ಎಂದಿದ್ಧಾರೆ. ಇನ್ನೂ  ಹಿರಿತನದ ಆಧಾರದಲ್ಲಿ ನನಗೆ ಮಂತ್ರಿ ಸ್ಥಾನ ನೀಡಬೇಕು. ಆದಾಗ್ಯು ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದರು. 

ಬಿಕೆ ಸಂಗಮೇಶ್ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ

ಭದ್ರಾವತಿ/ ಶಾಸಕ ಬಿಕೆ ಸಂಗಮೇಶ್​​ಗೆ ಸಚಿವ ಸ್ಥಾನವನ್ನು ಮೊದಲ ಸಂಪುಟ ರಚನೆಯಲ್ಲಿಯೇ ನೀಡಿಲ್ಲ ಎಂದು ತಾಲ್ಲೂಕಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಂಗಮೇಶ್ವರ್‌ರವರು ಮಿನಿಸ್ಟರ್ ಪಟ್ಟ ಏರಲೇಬೇಕು… ಎಂಬ ಟ್ಯಾಗ್​ಲೈನ್​ ಅಡಿಯಲ್ಲಿ ಅಭಿಯಾನ ನಡೆಯುತ್ತಿದೆ. 

ಭದ್ರಾವತಿಯಲ್ಲಿ 4 ನೇ  ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾದ ನಮ್ಮ ಬಿ.ಕೆ ಸಂಗಮೇಶ್ವರ್ ಅವರನ್ನು ಮಿನಿಸ್ಟರ್ ಮಾಡದೆ ಇನ್ಯಾರನ್ನ ಮಾಡುತ್ತೀರಾ..? ಎಂಬ ಪ್ರಶ್ನೆಯನ್ನ ಕಾಂಗ್ರೆಸ್​ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. 

 ಇನ್ನೂ ಭದ್ರಾವತಿಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಮಾತ್ರವಲ್ಲದೆ ಪಕ್ಷಭೇದ ಮರೆತು ವಿವಿಧ ಸಮುದಾಯಗಳು, ಸಂಘ-ಸಂಸ್ಥೆಗಳು, ಗಣ್ಯರು ಸಹ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.

ಒಂದು ವೇಳೆ ಸಚಿವ ಸ್ಥಾನ ನೀಡಲು ವಿಳಂಬ ಮಾಡಿದ್ದಲ್ಲಿ ಹೋರಾಟ ನಡೆಸುವ ಎಚ್ಚರಿಕೆ ಸಹ ಕೇಳಿ ಬರುತ್ತಿದೆ. ಈಗಾಗಲೇ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನ ಸಿಗದಿರುವ ಕುರಿತು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.  

Share This Article