Dummalli Murder case ಅದು ಬಾಡಿಗೆ ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಇದ್ದ ಹಳೆ ದ್ವೇಷ. ತನಗೆ ಆಗದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದಾಗ, ತಾಯಿ ಮಗ ಮಾನವೀಯತೆ ಮೆರೆದಿದ್ದೇ ಇಲ್ಲಿ ತಪ್ಪಾಗಿ ಹೋಗಿದೆ. ಹಲ್ಲೆಗೊಳಗಾದ ವ್ಯಕ್ತಿಗೆ ನೀರುಣಿಸಿ ಹರಿಶಿಣ ಹಚ್ಚಿದ್ದಕ್ಕೆ ರೊಚ್ಚಿಗೆದ್ದವನು ಮಹಿಳೆಯ ನೆತ್ತರನ್ನೇ ಹರಿಸಿಬಿಟ್ಟಿದ್ದಾನೆ….ಮಾನವೀಯತೆಗೆ ಕ್ರೌರ್ಯ ಅಡ್ಡಿಯಾದ ಈ ಸ್ಟೋರಿಯ ಅಸಲಿತ್ತೇನು ಈ ಕುರಿತ ವರದಿ ಇಲ್ಲಿದೆ.
ಹೀಗೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ನೆಲದ ಮೇಲೆ ಬಿದ್ದ ಈ ಮಹಿಳೆಗೆ ಯಾರೂ ದ್ವೇಷಿಗಳಿರಲಿಲ್ಲ. ಆದರೆ, ಒಂದು ಕ್ಷುಲ್ಲಕ ಕಾರಣಕ್ಕೆ ಈ ಮಹಿಳೆ ಬಲಿಯಾಗಿದ್ದಾಳೆ. ಇಬ್ಬರ ಜಗಳದಲ್ಲಿ ಹಲ್ಲೆಗೊಳಗಾದ ವ್ಯಕ್ತಿಗೆ ನೀರು ಕೊಟ್ಟು, ಅರಿಶಿಣ ಹಚ್ಚಿದ್ದೇ ಈ ಮಹಿಳೆ ಮಾಡಿದ ತಪ್ಪಾಗಿದೆ.
Dummalli Murder case ಘಟನೆಯ ವಿವರ
ದುಮ್ಮಳ್ಳಿಯಲ್ಲಿ ಗಂಗಮ್ಮ ಅವರು ತಮ್ಮ ಇಬ್ಬರು ಮಕ್ಕಳಾದ ಜೀವನ್ ಮತ್ತು ಸುನೀತ್ ಜೊತೆ ಹಲವು ವರ್ಷಗಳಿಂದ ವಾಸವಿದ್ದರು. ಸುಮಾರು ಎರಡು ವರ್ಷದ ಹಿಂದೆ ಜೀವನ್ ಅದೇ ಕೇರಿಯಲ್ಲಿದ್ದ ಹರೀಶ್ ನಾಯ್ಕ್ ಎಂಬುವರಿಗೆ ತಮ್ಮ ಚಿಕ್ಕಪ್ಪನ ಮನೆಯನ್ನು ಬಾಡಿಗೆ ಕೊಡಿಸಿದ್ದರು. ಆದರೆ, ಹರೀಶ್ ನಾಯ್ಕ್ ತಿಂಗಳ ಬಾಡಿಗೆಯನ್ನು ಸರಿಯಾಗಿ ಕಟ್ಟುತ್ತಿರಲಿಲ್ಲ. ಇದು ಜೀವನ್ ಮತ್ತು ಹರೀಶ್ ನಾಯ್ಕ್ ನಡುವೆ ಜಗಳಕ್ಕೆ ಕಾರಣವಾಗಿ, ದ್ವೇಷಕ್ಕೆ ತಿರುಗಿತ್ತು. ನಂತರ, ಒಂದು ವರ್ಷದ ಹಿಂದೆ ಹರೀಶ್ ನಾಯ್ಕ್‌ನು ಜೀವನ್ ಮನೆಯ ಮುಂಭಾಗದಲ್ಲೇ ಮನೆ ಮಾಡಿಕೊಂಡಿದ್ದ. ಜೀವನ್ ಓಡಾಡುವಾಗ ಆತನನ್ನು ಗುರಾಯಿಸುವುದು, ಸಿಟ್ಟಾಗುವುದು ಮಾಡುತ್ತಿದ್ದರೂ, ಅದು ಕೊಲೆ ಮಾಡುವಷ್ಟು ವಿಕೋಪಕ್ಕೆ ಹೋಗಿರಲಿಲ್ಲ.
ಆದರೆ, 09/11/2025 ರ ರಾತ್ರಿ 10:45 ರ ಸುಮಾರಿಗೆ, ಜೀವನ್ ತನ್ನ ತಾಯಿ ಗಂಗಮ್ಮ ಅವರೊಂದಿಗೆ ಮನೆಯ ಮುಂಭಾಗದ ಗೇಟಿನ ಬಳಿ ನಿಂತಿದ್ದರು. ಆಗ ಪಕ್ಕದ ಬೀದಿಯಲ್ಲಿ ವಾಸವಾಗಿರುವ ಜೀವನ್‌ಗೆ ಪರಿಚಿತನಾದ ಮಂಜುನಾಥ ಎಂಬುವನು ಬೈಕ್‌ನಲ್ಲಿ ಬರುತ್ತಾನೆ. ವಿಪರ್ಯಾಸವೆಂದರೆ, ಮಂಜುನಾಥ್ ಮತ್ತು ಹರೀಶ್ ನಾಯ್ಕ್ ಪರಸ್ಪರ ವೈರಿಗಳಂತಿದ್ದರು. ಜೀವನ್ ಮನೆ ಮುಂಭಾಗದ ರಸ್ತೆಯಲ್ಲಿ ಮಂಜುನಾಥ್ ಬರುತ್ತಿದ್ದಂತೆ, ಹರೀಶ್ ನಾಯ್ಕ್ ಅವನ ಮುಖಕ್ಕೆ ಬೀಸಿ ಹೊಡೆದಿದ್ದಾನೆ. ಇದರಿಂದ ಮಂಜುನಾಥ್ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ.ತಕ್ಷಣ ಗೇಟ್ ಬಳಿಯಿದ್ದ ಜೀವನ್ ಹಾಗೂ ಆತನ ತಾಯಿ ಗಂಗಮ್ಮ, ಗಾಯಗೊಂಡ ಮಂಜುನಾಥ್‌ಗೆ ನೀರು ಕೊಟ್ಟು ಉಪಚರಿಸಿದ್ದಾರೆ. ಮಂಜುನಾಥ್ ಹಣೆಗೆ ಗಾಯವಾಗಿದ್ದರಿಂದ ಅರಿಶಿಣವನ್ನು ಹಚ್ಚಿ ಸೌಹಾರ್ದತೆ ಮೆರೆದಿದ್ದಾರೆ.
Dummalli Murder case ಕೆರಳಿದ ಹರೀಶ್ ನಾಯ್ಕ್‌ನಿಂದ ಕೊಲೆ
ತನ್ನ ಎದುರಾಳಿ ಮಂಜುನಾಥ್‌ಗೆ ಉಪಚರಿಸಿದ್ದನ್ನು ನೋಡಿದ ಹರೀಶ್ ನಾಯ್ಕ್ ಕೆರಳಿದ್ದಾನೆ. ಆತ ಜೀವನ್ ಬಳಿ ಜಗಳ ತೆಗೆದು, ಹಲ್ಲೆ ನಡೆಸಿದ್ದಾನೆ. ಆಗ ಜೀವನ್ ತಾಯಿ ಗಂಗಮ್ಮ ಗಲಾಟೆ ಬಿಡಿಸಿ, ಮಗನನ್ನು ಮನೆಗೆ ಕರೆದುಕೊಂಡು ಹೋಗುವಾಗ ಹರೀಶ್ ನಾಯ್ಕ್ ಗಂಗಮ್ಮಗೆ ಮೊದಲು ಕಲ್ಲು ಬೀಸಿದ್ದಾನೆ.ನಂತರ ತನ್ನ ಸಹೋದರ ನಾಗೇಶ್ ನಾಯ್ಕ್‌ನೊಂದಿಗೆ ಮತ್ತೆ ಜಗಳಕ್ಕೆ ಬಂದಿದ್ದಾನೆ. ಸುಮಾರು 11:00 ಗಂಟೆ ಸಮಯದಲ್ಲಿ ಗಂಗಮ್ಮ ಮನೆಯ ಮುಂಭಾಗದಲ್ಲಿ ನಿಂತಿದ್ದಾಗ, ಹರೀಶ್ ನಾಯ್ಕ್ ಮನೆಯಿಂದ ಮಚ್ಚು ತೆಗೆದುಕೊಂಡು ಬಂದಿದ್ದಾನೆ. ಮನೆಯ ಮುಂಭಾಗದಲ್ಲಿ ನಿಂತಿದ್ದ ಗಂಗಮ್ಮ ಅವರ ಮೇಲೆ ಗಲಾಟೆ ತೆಗೆದು, ಹರೀಶ್ ನಾಯ್ಕ್ ಮತ್ತು ಆತನ ಸಹೋದರ ನಾಗೇಶ್ ಸೇರಿಕೊಂಡು ಗಂಗಮ್ಮ ಅವರ ಕುತ್ತಿಗೆಗೆ ಮಚ್ಚಿನಿಂದ ಹೊಡೆದಿದ್ದಾರೆ. ಗಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೊಲೆ ಮಾಡಿದ ನಂತರವೂ ರೋಷಾವೇಶದಲ್ಲಿದ್ದ ಹರೀಶ್ ನಾಯ್ಕ್, ನಿಮ್ಮ ತಾಯಿಗೆ ಆದ ಪರಿಸ್ಥಿತಿಯೇ ನಿಮಗೂ ಆಗುತ್ತದೆ ಎಂದು ಧಮ್ಕಿ ಹಾಕಿ ಹೋಗಿದ್ದಾನೆ. ಈ ಬಗ್ಗೆ ಜೀವನ್ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಹರೀಶ್ ನಾಯ್ಕ್ ಮತ್ತು ನಾಗೇಶ್ ನಾಯ್ಕ್ ಸಹೋದರರಿಬ್ಬರನ್ನು ಬಂಧಿಸಿದ್ದಾರೆ.
ಒಂದು ಸಣ್ಣ ವಿಚಾರಕ್ಕೆ ದೊಡ್ಡ ಅನಾಹುತವನ್ನು ಮಾಡಿಕೊಂಡಂತೆ, ಇಲ್ಲಿ ಹರೀಶ್ ನಾಯ್ಕ್ ಸಹೋದರರು ತಪ್ಪು ಮಾಡಿದ್ದಾರೆ. ಇಲ್ಲಿ ಎಲ್ಲವೂ ವಿಧಿಲಿಖಿತವಾದರೂ, ಎಲ್ಲದಕ್ಕಿಂತ ದೊಡ್ಡ ದಾನ ಸಮಧಾನ.
Dummalli Murder case


