Stock trading scam : ಶಿವಮೊಗ್ಗ: ಆನ್‌ಲೈನ್‌ನಲ್ಲಿ ಹೆಚ್ಚಿನ ಲಾಭಾಂಶದ ಭರವಸೆ ನೀಡಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ 43 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಸಾಮಾಜಿಕ ಜಾಲತಾಣವೊಂದರಲ್ಲಿ ಸ್ಟಾಕ್ ಟ್ರೇಡಿಂಗ್ ಕುರಿತ ಜಾಹೀರಾತು ವಿಡಿಯೋವನ್ನು ನೋಡಿದ್ದಾರೆ. ಆ ಜಾಹೀರಾತಿನ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅವರು ಒಂದು ವಾಟ್ಸಾಪ್ ಗುಂಪಿಗೆ ಸೇರಿಕೊಂಡಿದ್ದಾರೆ. ಗುಂಪಿಗೆ ಸೇರುವ ಮೊದಲು ತಮ್ಮ ವೈಯಕ್ತಿಕ ವಿವರಗಳಾದ ಮೊಬೈಲ್ ಸಂಖ್ಯೆ, ಹೆಸರು ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿದ್ದಾರೆ. ಗುಂಪಿಗೆ ಸೇರಿಕೊಂಡ ನಂತರ, ಅಪರಿಚಿತ ವ್ಯಕ್ತಿಗಳು ದೂರುದಾರರಿಗೆ ಒಂದು ಆನ್‌ಲೈನ್ ಹೂಡಿಕೆ ಆಪ್ಅನ್ನು ಡೌನ್‌ಲೋಡ್ ಮಾಡಿಸಿ, ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ನಂಬಿಸಿದ್ದಾರೆ.
ದೂರುದಾರರ ವಾಟ್ಸಾಪ್ ಮ್ಯಾನೇಜರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ಸಂದೇಶಗಳ ಮೂಲಕ ವಿವಿಧ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ ಹಣ ವರ್ಗಾಯಿಸಲು ಹೇಳಿದ್ದಾರೆ. ಇದರಿಂದಾಗಿ ದೂರುದಾರರು, ತಮ್ಮ ಮತ್ತು ತಮ್ಮ ಪತ್ನಿಯ ಖಾತೆಯಿಂದ ಹಂತ ಹಂತವಾಗಿ ಅಪರಿಚಿತ ಖಾತೆಗಳಿಗೆ ಒಟ್ಟು 43,00,000 ವರ್ಗಾಯಿಸಿದ್ದಾರೆ.
ದೂರುದಾರರು ಹೂಡಿಕೆ ಮಾಡಿದ ನಂತರ, ಆನ್‌ಲೈನ್ ಹೂಡಿಕೆ ಆಪ್‌ನಲ್ಲಿ ಅವರಿಗೆ ತಾವು ಹಾಕಿದ ಹಣ ಮತ್ತು ಬಂದ ಲಾಭಾಂಶ ಸೇರಿ ಒಟ್ಟು ಒಂದು ಕೋಟಿಗೂ ಹೆಚ್ಚು ಮೊತ್ತವಿದೆ ಎಂದು ತೋರಿಸಲಾಗಿದೆ. ಆದರೆ, ದೂರುದಾರರು 20 ಲಕ್ಷ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅದು ವಿಫಲವಾಗಿದೆ.ಈ ಬಗ್ಗೆ ವಂಚಕರನ್ನು ವಿಚಾರಿಸಿದಾಗ, ಹಣ ಹಿಂಪಡೆಯಲು ಹೆಚ್ಚುವರಿಯಾಗಿ ಶೇ. 10 ರಷ್ಟು ಹಣವನ್ನು ಕಟ್ಟಬೇಕೆಂದು ತಿಳಿಸಿ ಮತ್ತಷ್ಟು ವಂಚನೆಗೆ ಯತ್ನಿಸಿದ್ದಾರೆ. ವಂಚನೆ ಅರಿತ ದೂರುದಾರರು, ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

