CEN Crime Police Station ಖಾಸಗಿ ವಿಡಿಯೋ, ಫೋಟೋ ವೈರಲ್: ಶಿವಮೊಗ್ಗದಲ್ಲಿ ದೂರು ದಾಖಲು, ₹2 ಲಕ್ಷಕ್ಕೆ ಬೇಡಿಕೆ, ಏನಿದು ಪ್ರಕರಣ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತಾಲೂಕುಒಂದರಲ್ಲಿ ಮಹಿಳೆಯೊಬ್ಬರ ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ಅಕ್ರಮವಾಗಿ ಪಡೆದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
CEN Crime Police Station ಏನಿದು ಘಟನೆ
ದೂರಿನ ಪ್ರಕಾರ, ಅಪರಿಚಿತ ಫೋನ್ ನಂಬರ್‌ನಿಂದ ಮಹಿಳೆಯ ವಾಟ್ಸಾಪ್ ಖಾತೆಗೆ ಆಕೆಯ ಕೆಲವೊಂದು ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ಕಳುಹಿಸಲಾಗಿದೆ. ಅವುಗಳನ್ನು ಡಿಲೀಟ್ ಮಾಡಲು 2 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಮಾನ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಲಾಗಿದೆ. ಆತಂಕಗೊಂಡ ದೂರುದಾರರು ಯಾವುದೇ ಹಣ ನೀಡದೆ, ಆ ವೀಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿ, ಆ ನಂಬರನ್ನು ಬ್ಲಾಕ್ ಮಾಡಿ ಸುಮ್ಮನಾಗಿದ್ದರು.
ಆದರೆ, ಎರಡು ದಿನಗಳ ಹಿಂದೆ, ದೂರುದಾರರ ಪತಿಯ ವಾಟ್ಸಾಪ್ ಖಾತೆ ಸಂಖ್ಯೆಗೆ ಅವರ ಪರಿಚಿತರು ಅದೇ ಖಾಸಗಿ ವೀಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ್ದಾರೆ. ಅಪರಿಚಿತ ಮೊಬೈಲ್ ನಂಬರ್ ನಿಂದ ಈ ವೀಡಿಯೊಗಳು ತಾಲೂಕಿನ ತುಂಬಾ ಜನರ ವಾಟ್ಸಾಪ್ ಮೂಲಕ ವೈರಲ್ ಆಗಿರುವುದಾಗಿ ಪತಿಯ ಪರಿಚಿತರು ತಿಳಿಸಿದ್ದಾರೆ. ಕೂಡಲೇ ಈ ಬಗ್ಗೆ ದೂರು ನೀಡುವಂತೆ ಅವರು ಸಲಹೆ ನೀಡಿದ್ದಾರೆ.
ಯಾವುದೋ ಮೂಲದಿಂದ ತಮ್ಮ ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ಕದ್ದು, ಅವುಗಳನ್ನು ತಮ್ಮ ಅನುಮತಿ ಇಲ್ಲದೇ, ದೂರುದಾರರಿಗೆ, ಅವರ ಪತಿಗೆ ಮತ್ತು ಪರಿಚಯಸ್ಥರಿಗೆ ವಾಟ್ಸಾಪ್ ಮೂಲಕ ಪ್ರಸಾರ ಮಾಡಿ ಹಣಕ್ಕೆ ಬೇಡಿಕೆ ಇಟ್ಟವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

