ಶಿವಮೊಗ್ಗ : ಡಿಜಿಟಲ್ ಅರೆಸ್ಟ್ 19 ಲಕ್ಷ ವಂಚನೆ : ಒಂದೇ ತಿಂಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

prathapa thirthahalli
Prathapa thirthahalli - content producer

Shivamogga Cyber Crime : ಶಿವಮೊಗ್ಗ: ಡಿಜಿಟಲ್ ಅರೆಸ್ಟ್’ ತಂತ್ರದ ಮೂಲಕ 51 ವರ್ಷದ ವ್ಯಕ್ತಿಯೊಬ್ಬರನ್ನು ಹೆದರಿಸಿ, ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದ 19 ಲಕ್ಷ ಹಣವನ್ನು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಫ್ರೀಜ್ ಮಾಡಿ, ಯಶಸ್ವಿಯಾಗಿ ವಾರಸುದಾರರಿಗೆ ಹಿಂದಿರುಗಿಸುವಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

Shivamogga Cyber Crime ಏನಿದು ಪ್ರಕರಣ

ದಿನಾಂಕ 17-09-2025 ರಂದು ಶಿವಮೊಗ್ಗ ನಗರದ ನಿವಾಸಿಯೊಬ್ಬರಿಗೆ ಅಪರಿಚಿತ ಮೊಬೈಲ್‌ನಿಂದ ವಾಟ್ಸಾಪ್ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿಯು ತನ್ನನ್ನು ಮುಂಬೈನ ಕೊಲಬಾ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡು, ಅವರ ಆಧಾರ್ ಕಾರ್ಡ್ ಬಳಸಿಕೊಂಡು ಮುಂಬೈ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ಸೈಬರ್ ಅಪರಾಧಿಗಳಿಗೆ ಹಣ ವರ್ಗಾಯಿಸಲಾಗಿದೆ. ಹಾಗಾಗಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾನೆ. ಇದು ಅಂತರರಾಷ್ಟ್ರೀಯ ಭದ್ರತಾ ವಿಚಾರವಾಗಿರುವುದರಿಂದ ಯಾರಿಗೂ ತಿಳಿಸಬಾರದೆಂದು ಎಚ್ಚರಿಕೆ ನೀಡಿದ್ದಾನೆ.

- Advertisement -

ಮರುದಿನ, ವಂಚಕರು ಪೊಲೀಸ್ ಯೂನಿಫಾರಂನಲ್ಲಿ ವಿಡಿಯೋ ಕಾಲ್ ಮಾಡಿ, ಕೋರ್ಟ್ ಹಾಲ್‌ನಂತೆಯೇ ಇರುವ ಸ್ಥಳದಲ್ಲಿ ನ್ಯಾಯಾಧೀಶರ ರೀತಿ ಕುಳಿತಿದ್ದ ಮತ್ತೊಬ್ಬ ವ್ಯಕ್ತಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರಂತೆ ನಟಿಸಿದ ವ್ಯಕ್ತಿಯು, ಬ್ಯಾಂಕ್ ಲಾಕರ್‌ನಲ್ಲಿರುವ ಚಿನ್ನವನ್ನು ತೂಕ ಮಾಡಿಸಿ ಅದರ ಮೇಲೆ ಎಷ್ಟು ಸಾಲ ಸಿಗುತ್ತದೆಯೋ, ಅದರ ಅರ್ಧದಷ್ಟು ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಳ್ಳುವಂತೆ ಸೂಚಿಸಿದ್ದಾನೆ. ಈ ಸೂಚನೆಯನ್ನು ನಂಬಿದ ವ್ಯಕ್ತಿ ಬ್ಯಾಂಕಿನಿಂದ ಒಟ್ಟು  19 ಲಕ್ಷ ಸಾಲ ಮಾಡಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ನಂತರ, ವಂಚಕರ ಸೂಚನೆಯ ಮೇರೆಗೆ, ಆ ಸಂಪೂರ್ಣ  19 ಲಕ್ಷ ಹಣವನ್ನು ತಾವು ಹೇಳಿದ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ವಿಚಾರವನ್ನು ತಮ್ಮ ಮಗಳಿಗೆ ತಿಳಿಸಿದಾಗ, ತಾನು ಸೈಬರ್ ವಂಚಕರ ಜಾಲಕ್ಕೆ ಬಲಿಯಾಗಿರುವುದು ಗೊತ್ತಾಗಿದೆ. ಈ ಸಂಬಂಧ ದಿನಾಂಕ 23-09-2025 ರಂದು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (ಗುನ್ನೆ ಸಂಖ್ಯೆ 0092/2025) ಕಲಂ 66(ಡಿ) ಐಟಿ ಕಾಯ್ದೆ ಮತ್ತು 318 (4), 319 (2) ಬಿ.ಎನ್.ಎಸ್ ಕಾಯ್ದೆಗಳಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎ.ಜಿ. ಕಾರ್ಯಪ್ಪ (ಎಎಸ್‌ಪಿ-1) ಮತ್ತು ಶ್ರೀ ರಮೇಶ್ ಕುಮಾರ್ ಎಸ್ (ಎಎಸ್‌ಪಿ-2) ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್‌ಪಿ ಕೃಷ್ಣಮೂರ್ತಿ ಅವರ ಮೇಲ್ವಿಚಾರಣೆಯಲ್ಲಿ, ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾಗಿ, ವಂಚನೆಗೊಳಗಾದ  19 ಲಕ್ಷ ಹಣವನ್ನು ಯಾವ ಖಾತೆಗೆ ವರ್ಗಾವಣೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿ, ಆ ಹಣವನ್ನು ಕೂಡಲೇ ‘ಫ್ರೀಜ್’ ಮಾಡಿಸುವಲ್ಲಿ ಯಶಸ್ವಿಯಾಗಿದೆ. ನಂತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ವಂಚನೆಗೊಳಗಾದ ಸಂಪೂರ್ಣ ಹಣವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಸೈಬರ್ ಕ್ರೈಂ ಪೊಲೀಸರು ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *