Police Transfer Karnataka : ಶಿವಮೊಗ್ಗ : ರಾಜ್ಯದಲ್ಲಿ 35 ಪಿಎಸ್‌ಐಗಳ ವರ್ಗಾವಣಾ ಆದೇಶ ಹೊರಬಿದ್ದ ಬೆನ್ನಲ್ಲೇ, ಪೊಲೀಸ್ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗಿದೆ. ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಸೌಮೇಂದು ಮುಖರ್ಜಿ (ಐಪಿಎಸ್) ಅವರು ಏಕಕಾಲಕ್ಕೆ 27 ಡಿವೈಎಸ್‌ಪಿಗಳು ಮತ್ತು ವಿವಿಧ ಠಾಣೆಗಳ 131 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಬೃಹತ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕೆಲ ಹಿರಿಯ ಅಧಿಕಾರಿಗಳ ಹುದ್ದೆಗಳು ಬದಲಾವಣೆ ಕಂಡಿವೆ. ಭದ್ರಾವತಿಯ ಡಿವೈಎಸ್‌ಪಿ ನಾಗರಾಜ್ ಕೆ.ಆರ್. ಅವರನ್ನು ಚಿಕ್ಕಮಗಳೂರು ಉಪವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಸದ್ಯಕ್ಕೆ ಯಾರನ್ನೂ ನಿಯೋಜಿಸಲಾಗಿಲ್ಲ.
ಇನ್ಸ್‌ಪೆಕ್ಟರ್‌ಗಳ ಸ್ಥಾನಗಳಲ್ಲಿ ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಜಿಲ್ಲೆಯಲ್ಲಿ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಜಗದೀಶ್ ಸಿ. ಹಂಚಿನಾಳ ಅವರು ಶಿವಮೊಗ್ಗದ ಡಿಸಿಬಿ (ಜಿಲ್ಲಾ ಅಪರಾಧ ವಿಭಾಗ) ಗೆ ವರ್ಗಾವಣೆಗೊಂಡಿದ್ದಾರೆ. ಶಿವಮೊಗ್ಗ ಡಿಸಿಬಿ ಪಿಐ ಆಗಿದ್ದ ಅಣ್ಣಯ್ಯ ಕೆ.ಟಿ. ಅವರನ್ನು ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸ್ಥಾನಕ್ಕೆ ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಚಿದಾನಂದ ಅವರನ್ನು ನೇಮಕ ಮಾಡಲಾಗಿದೆ.
ಹಾವೇರಿ ಡಿಸಿಬಿಯಲ್ಲಿದ್ದ ಪಿಐ ಮುತ್ತನ ಗೌಡ ಐ. ಗೌಡಪ್ಪಗೌಡರ್ ಅವರು ಬಡ್ತಿ ಪಡೆದು ಹೊಸನಗರ ವೃತ್ತಕ್ಕೆ ಸಿಪಿಐ ಆಗಿ ನಿಯೋಜನೆಗೊಂಡಿದ್ದಾರೆ. ಹೊಸನಗರ ವೃತ್ತ ನಿರೀಕ್ಷಕರಾಗಿದ್ದ ಗುರಣ್ಣ ಎಸ್. ಹೆಬ್ಬಾಳೆ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ. ಹಾಗೆಯೇ, ಸೊರಬದ ವೃತ್ತ ನಿರೀಕ್ಷಕರಾಗಿದ್ದ ರಾಜಶೇಖರಯ್ಯ ಎಲ್. ಅವರೂ ಕೂಡ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ವೃತ್ತ ನಿರೀಕ್ಷಕರಾಗಿದ್ದ ಮಹಂತೇಶ್ ಕೆ. ಲಂಬಿ ಅವರಿಗೆ ಸೊರಬ ವೃತ್ತ ನಿರೀಕ್ಷಕರ ಸ್ಥಾನಕ್ಕೆ ವರ್ಗಾಯಿಸಿ ಆದೇಶಿಸಲಾಗಿದೆ.
Police Transfer Karnataka

