Ks eshwarappa : ರಾಜ್ಯ ಸರ್ಕಾರ ಓಟ್ ಬ್ಯಾಂಕ್ಗಾಗಿ ಜಾತಿಗಣತಿ ನಡೆಸುತ್ತಿದೆ : ಕೆ ಎಸ್ ಈಶ್ವರಪ್ಪ
ಶಿವಮೊಗ್ಗ : ರಾಜ್ಯ ಸರ್ಕಾರವು ಜಾತಿ ಗಣತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆಯುವ ಮತ್ತು ತನ್ನ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ‘ಹಿಡನ್ ಅಜೆಂಡಾ’ವನ್ನು ಸ್ಪಷ್ಟವಾಗಿ ಕಾರ್ಯಗತಗೊಳಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾತಿಗಣತಿ ಮಾಡುತ್ತೇವೆ ಎಂದು ಹೇಳಿ ಹಿಂದೂ ಸಮಾಜಕ್ಕೆ ಅಪಮಾನ ಮಾಡುತ್ತಿದೆ. ಈ ಹಿಂದೆ ಕೈಗೊಂಡಿದ್ದ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿಗಣತಿ ಸಮೀಕ್ಷೆಯ ವರದಿಯನ್ನು ಕಾಂತರಾಜ್ ಆಯೋಗವು ಸಲ್ಲಿಸಿತ್ತು. ಈಗ ಸುಮಾರು 420 ಕೋಟಿ ರೂ. ವೆಚ್ಚದಲ್ಲಿ ಮತ್ತೊಮ್ಮೆ ಗಣತಿ ನಡೆಸಲು ಹೊರಟಿದೆ. ಜಾತಿಗಣತಿ ಮೂಲಕ ಹಿಂದೂಗಳನ್ನು ವಿಭಜಿಸಿ, ಕಾಂಗ್ರೆಸ್ ತನ್ನ ಮತಬ್ಯಾಂಕ್ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.
Ks eshwarappa : ಹಿಂದಿನ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ ಜಾತಿ ಪಟ್ಟಿಯಲ್ಲಿ ಮತಾಂತರಗೊಂಡ ಹಿಂದೂಗಳಿಗಾಗಿ ಹೆಚ್ಚುವರಿ ಜಾತಿಗಳನ್ನು ಸೃಷ್ಟಿಸಲಾಗಿದೆ. ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ಎಂದು ಸುಮಾರು 50ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಹೆಸರಿನಲ್ಲಿ ಸೇರಿಸಲಾಗಿದೆ. ಹಿಂದೂಯೇತರ ಧರ್ಮಗಳ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಹೆಚ್ಚು ತೋರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಈಶ್ವರಪ್ಪ ಆರೋಪಿಸಿದರು. ಇದರಿಂದಾಗಿ ಹಿಂದೂಗಳಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಮತಾಂತರಗೊಂಡವರು ಕಬಳಿಸಲು ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಮ್ಮ ಸಂವಿಧಾನದಲ್ಲಿರುವ 6 ಧರ್ಮಗಳ ಹೊರತಾಗಿ ಬೇರೆ ಯಾವುದೇ ಧರ್ಮಗಳ ಸೇರ್ಪಡೆ ಸಂವಿಧಾನ ವಿರೋಧಿಯಾಗಿದೆ. ಆದರೆ, ರಾಜ್ಯ ಸರ್ಕಾರ ಹಿಂದುಳಿದ ಆಯೋಗದ ಮೂಲಕ ‘ಮತಾಂತರಗೊಂಡ ಕ್ರೈಸ್ತರು’ ಎಂಬ ಹೊಸ ಧರ್ಮವನ್ನು ಹುಟ್ಟುಹಾಕಿದೆ. ಈ ಸಂವಿಧಾನ ಬಾಹಿರ ಹಿಂದೂ ಜಾತಿಗಳ ಹೆಸರಿನೊಂದಿಗಿನ ಕ್ರಿಶ್ಚಿಯನ್ ಹೆಸರಿನ ಪಟ್ಟಿಯನ್ನು ಕೂಡಲೇ ಹಿಂಪಡೆದು, ಆಗಿರುವ ಪ್ರಮಾದಕ್ಕೆ ಹಿಂದೂಗಳ ಕ್ಷಮೆ ಕೇಳಬೇಕು. ಈ ತಿಂಗಳ 22ರಿಂದ ಆರಂಭವಾಗುವ ಸಮೀಕ್ಷೆಯಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
Ks eshwarappa

