ನರೇಂದ್ರ ಮೋದಿ ಜನ್ಮದಿನ : ಶಿವಮೊಗ್ಗದಲ್ಲಿ ‘ಸ್ವಸ್ಥ ನಾರಿ-ಸಶಕ್ತ ಪರಿವಾರ’ ಆರೋಗ್ಯ ಅಭಿಯಾನ : ಏನಿದು ಕಾರ್ಯಕ್ರಮ

prathapa thirthahalli
Prathapa thirthahalli - content producer

Narendra modi birthday : ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರವರೆಗೆ ಸ್ವಸ್ಥ ನಾರಿ – ಸಶಕ್ತ ಪರಿವಾರ’ ಎಂಬ ಆರೋಗ್ಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರದೃಷ್ಟಿ ಹೊಂದಿರುವ ನರೇಂದ್ರ ಮೋದಿ ಅವರು ನಮ್ಮ ದೇಶವನ್ನು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ತ್ಯಾಗ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಅವರು ಭಾರತವನ್ನು ವಿಶ್ವದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಪಕ್ಷ, ಜಾತಿ, ಧರ್ಮಗಳನ್ನು ಮೀರಿ ಇಂತಹ ನಾಯಕರ ಜನ್ಮದಿನವನ್ನು ಆಚರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

Narendra modi birthday : ಉಚಿತ ಆರೋಗ್ಯ ತಪಾಸಣೆ ಶಿಬಿರ

ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣದ ಮೂಲಕ ‘ವಿಕಸಿತ ಭಾರತ’ದ ಕನಸನ್ನು ನನಸು ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಈ ಅಭಿಯಾನದ ಭಾಗವಾಗಿ, ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗಿದೆ.  ನಾಳೆ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದ ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು.

ಇದರ ಜೊತೆಗೆ, ಮಧ್ಯಪ್ರದೇಶದಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮದ ನೇರ ಪ್ರಸಾರವನ್ನು ಕೂಡ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ 7 ಸಮುದಾಯ ಆಧಾರಿತ ಆರೋಗ್ಯ ಕೇಂದ್ರಗಳಲ್ಲಿ ಈ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಗರ್ಭ ಆರೋಗ್ಯ ತಪಾಸಣೆ, ಕ್ಯಾನ್ಸರ್‌ ತಪಾಸಣೆ, ರಕ್ತದಾನ, ದಂತ ಚಿಕಿತ್ಸೆ ನಡೆಸಲಾಗುತ್ತದೆ. ಸೆ.17ರಂದು ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರ, ಸೆ.19ರಂದು ಆನಂದಪುರ, ಸೆ.22ರಂದು ಶಿರಾಳಕೊಪ್ಪ, ಸೆ.24ರಂದು ಆಯನೂರು, ಸೆ.26ರಂದು ಹೊಳಲೂರು ಮತ್ತು ಕನ್ನಂಗಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಿಬಿರ ನಡೆಯಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಕುಟುಂಬದ ಆರೋಗ್ಯದತ್ತ ವಿಶೇಷ ಗಮನ ಹರಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. ಶಿವಮೊಗ್ಗದ ಜನರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ರಾಘವೇಂದ್ರ ಮನವಿ ಮಾಡಿದರು. 

Narendra modi birthday

 

Share This Article