ಅಪಘಾತದ ನಂತರ ಕಾರು ಪರಿಶೀಲಿಸಿದಾಗ ಕುಟುಂಸ್ಥರಿಗೆ ಕಾದಿತ್ತು ಆಘಾತ : ಏನಿದು ಘಟನೆ

prathapa thirthahalli
Prathapa thirthahalli - content producer

Thirthahalli car accident ತೀರ್ಥಹಳ್ಳಿ ತಾಲ್ಲೂಕಿನ ತಲ್ಲೂರು ಬಳಿ ಸಂಭವಿಸಿದ ಕಾರು ಅಪಘಾತದ ನಂತರ, ಆಸ್ಪತ್ರೆಗೆ ದಾಖಲಾಗಿದ್ದ ಕುಟುಂಬವೊಂದರ ವಾಹನದಿಂದ ₹15 ಸಾವಿರ ನಗದು ಮತ್ತು ₹1.47 ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳು ಕಳುವಾಗಿರುವ ಕುರಿತು ದೂರು ದಾಖಲಾಗಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆ 305(c) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Thirthahalli car accident ಘಟನೆಯ ವಿವರ

ಮಂಗಳೂರಿನ ಸುರತ್ಕಲ್‌ನಲ್ಲಿ ವಾಸವಾಗಿರುವ ಶಾಜ್ಞಾನ್ ಎಂಬುವವರು ತಮ್ಮ ಅಣ್ಣನ ಬೆನ್ನುನೋವಿನ ಚಿಕಿತ್ಸೆಗಾಗಿ ಕುಟುಂಬದ ಸದಸ್ಯರೊಂದಿಗೆ ಸೆಪ್ಟೆಂಬರ್ 1 ರಂದು ತೀರ್ಥಹಳ್ಳಿಯ ನಾಟಿ ವೈದ್ಯರ ಬಳಿಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ತೀರ್ಥಹಳ್ಳಿ ತಾಲ್ಲೂಕಿನ ತಲ್ಲೂರು ಗ್ರಾಮದ ಕೌರಿಹಕುಲು ಬಳಿ ಅವರ ಹುಂಡೈ ಕ್ರೆಟಾ (KA-19 MG-4162) ಕಾರು ಅಪಘಾತಕ್ಕೀಡಾಯಿತು. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಶಾಜ್ಞಾನ್, ಅವರ ಅಣ್ಣ ಶವಾಜ್ ಅಹಮ್ಮದ್, ಅತ್ತಿಗೆ ಯಾಸ್ಮಿನ್, ಭಾವ ಅಬ್ದುಲ್ ಲತೀಫ್ ಹಾಗೂ ಮಕ್ಕಳಾದ ಮಹಮ್ಮದ್ ಇಲಾನ್ ಮತ್ತು ಅಯಾಸ್ ಅಬ್ದುಲ್ ರೆಹಮಾನ್ ಗಾಯಗೊಂಡರು.

ಗಾಯಗೊಂಡ ಎಲ್ಲರನ್ನು ಒಂದು ಆಂಬ್ಯುಲೆನ್ಸ್ ಮೂಲಕ ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯಿಂದ ಚೇತರಿಸಿಕೊಂಡು ತಮ್ಮ ವಸ್ತುಗಳನ್ನು ಪರಿಶೀಲಿಸಿದಾಗ, ಶಾಜ್ಞಾನ್ ಕುಟುಂಬಕ್ಕೆ ಆಘಾತ ಕಾದಿತ್ತು. ಶವಾಜ್ ಅಹಮ್ಮದ್ ಅವರ ₹30,000 ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್ ಫೋನ್ ಮತ್ತು ₹15 ಸಾವಿರ ನಗದು ಇದ್ದ ಪರ್ಸ್ ಕಾಣೆಯಾಗಿತ್ತು. ಜೊತೆಗೆ, ಯಾಸ್ಮಿನ್ ಅವರ ₹1,17,000 ಮೌಲ್ಯದ ಐಫೋನ್ 15 ಪ್ರೋ ಮ್ಯಾಕ್ಸ್ ಮೊಬೈಲ್ ಕೂಡ ಕಳುವಾಗಿತ್ತು.

Thirthahalli car accident ಅಪಘಾತ ಸಂಭವಿಸಿದ ಸ್ಥಳಕ್ಕೆ ಹೋಗಿ ಹುಡುಕಾಡಿದರೂ ಯಾವುದೇ ವಸ್ತುಗಳು ಸಿಗಲಿಲ್ಲ. ಅಪಘಾತವಾದಾಗ ಕುಟುಂಬದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾರಿನಲ್ಲಿದ್ದ ಈ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದು ಹಲವು ದಿನಗಳ ನಂತರ ದೂರುದಾರ ಶಾಜ್ಞಾನ್ ಅವರು ತಡವಾಗಿ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಿ, ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರನ್ನು ಕೋರಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article