Mlc ds arun : ಮದ್ದೂರು ಗಲಾಟೆಗೆ ರಾಜ್ಯ ಸರ್ಕಾರದ ನೀತಿಗಳೇ ನೇರ ಕಾರಣ : ಡಿಎಸ್ ಅರುಣ್
Mlc ds arun ಶಿವಮೊಗ್ಗ: ಮಂಡ್ಯದ ಮದ್ದೂರಿನಲ್ಲಿ ನಡೆದ ಗಲಾಟೆಗೆ ರಾಜ್ಯ ಸರ್ಕಾರದ ನೀತಿಗಳೇ ನೇರ ಕಾರಣ ಎಂದು ಬಿಜೆಪಿ ಎಂಎಲ್ಸಿ ಡಿ.ಎಸ್. ಅರುಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರವು ಹಲವು ಗಂಭೀರ ಪ್ರಕರಣಗಳನ್ನು ಮುಕ್ತಗೊಳಿಸುವ ಮೂಲಕ ಮುಸ್ಲಿಮರಿಗೆ ‘ಅಭಯ ಹಸ್ತ’ ನೀಡುತ್ತಿದೆ, ಇದರ ಪರಿಣಾಮವೇ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಎಸ್. ಅರುಣ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. “ಡಿಜೆ ಹಳ್ಳಿ- ಕೆಜೆ ಹಳ್ಳಿ ಗಲಭೆ ಪ್ರಕರಣ ಮತ್ತು ವಿಧಾನಸೌಧದ ಒಳಗೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಗಲಭೆ ಮಾಡಿದವರ ಮೇಲಿನ ಪ್ರಕರಣಗಳನ್ನೂ ಖುಲಾಸೆ ಮಾಡಲಾಗಿದೆ. ಈ ರೀತಿಯ ನಿರ್ಧಾರಗಳಿಂದಲೇ ‘ಏನು ಬೇಕಾದರೂ ಮಾಡಿ, ನಾವು ಕೇಸ್‌ಗಳನ್ನು ವಾಪಸ್ ಪಡೆಯುತ್ತೇವೆ’ ಎಂಬ ಧೈರ್ಯ ಮುಸ್ಲಿಂ ಸಮುದಾಯದ ಕೆಲವು ವ್ಯಕ್ತಿಗಳಿಗೆ ಬಂದಿದೆ” ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈಗ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ಎಸೆಯುವವರು ನಾಳೆ ಜನರ ಮೇಲೆ ಕಲ್ಲು ಎಸೆಯುತ್ತಾರೆ,. ಅವರಿಗೆ ಯಾವುದೇ ಭಯವಿಲ್ಲ. ಸಚಿವ ಜಮೀರ್ ಅಹಮದ್ ಕೂಡ ಇದಕ್ಕೆ ಬೆಂಬಲ ನೀಡುವಂತೆ ಮಾತನಾಡುತ್ತಿದ್ದಾರೆ. ಯಾವುದೇ ಘಟನೆ ನಡೆದರೂ ಹಿಂದೂಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಿ, ಮುಸ್ಲಿಮರ ಮೇಲೆ ದಾಖಲಿಸಿದರೂ ಅದನ್ನು ನಂತರ ವಾಪಸ್ ಪಡೆಯಲಾಗುತ್ತದೆ. ಇದು ಬಹುಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ ಮುಂದುವರಿಯಲು ಕಾರಣವಾಗಿದೆ” ಎಂದು ಅರುಣ್ ಹೇಳಿದರು.
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಹಾಕಲು ನಿರ್ಬಂಧ ಹೇರಿರುವುದನ್ನು ಖಂಡಿಸಿದ ಅರುಣ್, ಚಿತ್ರದುರ್ಗದ ಜಿಲ್ಲಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. “ಡಿಜೆ ಮತ್ತು ಧ್ವನಿವರ್ಧಕಗಳಿಗೆ ಏನು ವ್ಯತ್ಯಾಸ ಎಂದು ಅರ್ಥವಾಗುತ್ತಿಲ್ಲ. ಬೆಳಿಗ್ಗೆ 4:30ಕ್ಕೆ ಬರುವ ಅಜಾನ್‌ನ ಧ್ವನಿ ಡೆಸಿಬಲ್ ಮಟ್ಟವನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ ಗಣಪತಿ ವಿಸರ್ಜನೆಗೆ ಡಿಜೆ ಮತ್ತು ಸ್ಪೀಕರ್‌ಗಳನ್ನು ಹಾಕಲು ಹೋದರೆ ಕಿತ್ತುಕೊಂಡು ಹೋಗುತ್ತಾರೆ. ಬಹುಸಂಖ್ಯಾತ ಹಿಂದೂಗಳು ಯಾವುದೇ ಆಚರಣೆಗಳನ್ನು ಮಾಡಲು ಹೋದಾಗ ಮಾತ್ರ ಕಾನೂನಿನ ಬಗ್ಗೆ ಮಾತನಾಡುತ್ತಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.