Varamahalakshmi ನಾಡಿನ ಸಮಸ್ತ ಜನತೆಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು! ಇವತ್ತು ವರಮಹಾಲಕ್ಷ್ಮೀ ಹಬ್ಬ! ಮನೆ ಮನೆಗಳಲ್ಲಿಯು ಲಕ್ಷ್ಮೀಯ ಆರಾಧನೆಯು ವಿಶೇಷವಾಗಿ ನಡೆಯುತ್ತದೆ. ಹಿಂದಿನಿಂದ ಬಂದ ಉಕ್ತಿಯಂತೆ, ವರಮಹಾಲಕ್ಷ್ಮೀ ಹಬ್ಬ ಅಥವಾ ವೃತವನ್ನು ಆಚರಿಸುವುದು ಸುಲಭ! ಮನಸ್ಸಿನಿಂದ ಶೃದ್ಧೆಯಿಂದ ಆಚರಿಸಿದರೆ, ಆಧ್ಯಾತ್ಮವೂ ಮನಸ್ಸಿನಲ್ಲಿ ಶಾಂತಿ ಹಾಗೂ ಭರವಸೆ ಮತ್ತು ಉತ್ಸಾಹಗಳನ್ನು ತುಂಬುತ್ತದೆ..ಈ ನಿಟ್ಟಿನಲ್ಲಿ ವರಮಹಾಲಕ್ಷ್ಮೀಯ ವೃತವನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಆ ಪೈಕಿ, ವಿಶಿಷ್ಟ ಹಾಗೂ ಸಂಪ್ರದಾಯ ಬದ್ದವಾದ ಆಚರಣೆಯ ರೀತಿಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಅಂದಹಾಗೆ ಶ್ರಾವಣ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯ ಸಮೀಪದ ಶುಕ್ರವಾರದಂದು ಅಥವಾ ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಮೂರನೇ ಶುಕ್ರವಾರ ವರಮಹಾಲಕ್ಷ್ಮೀಯ ವೃತವನ್ನು ಆಚರಿಸಲಾಗುತ್ತದೆ.
Varamahalakshmi ಪೂಜೆಗೆ ಸಿದ್ದತೆ
ಅರಿಶಿನ, ಕುಂಕುಮ, ಮಂತ್ರಾಕ್ಷತೆ, ಕಳಶ, ಕಳಶ ವಸ್ತ್ರ, ವಿಳ್ಳೆದೆಲೆ ಅಡಿಕೆ, ಹೂವು ಹಣ್ಣು, ದೋರ , ಮುಖವಾಡ, ಕಿವಿಯೋಲೆ, ಮೂಗುತಿ, ಕಾಲುಂಗುರ, ಬಳೆ, ಗೆಜ್ಜೆ ವಸ್ತ್ರ, ಮೊರದ ಬಾಗಿನ, ಕಾಡಿಗೆ, ಮಂಗಳಾರತಿ ಬತ್ತಿ , ಕರ್ಪೂರ, ತೆಂಗಿನಕಾಯಿ, ದಕ್ಷಿಣೆ, ದಾನಕ್ಕೆ ಬೇಕಾದ ಪದಾರ್ಥಗಳು, ಪಂಚಾಮೃತಕ್ಕೆ ಬೇಕಾದ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಇತ್ಯಾದಿಗಳನ್ನು ಅನುಕೂಲಕ್ಕೆ ತಕ್ಕಂತೆ ಸಿದ್ಧಪಡಿಸಿಕೊಳ್ಳಬಹುದು! ಸರಳವಾಗಿಯೇ ಆಚರಿಸುವವರು ಲಭ್ಯವಿರುವುದರಲ್ಲಿಯೇ ವೃತ ಆಚರಿಸಬಹುದು! ಭಕ್ತಿ ಮುಖ್ಯವೆ ಹೊರತು ಆಚರಣೆಯಲ್ಲ.
ಅಷ್ಟಲಕ್ಷ್ಮೀಯರು
ಆರಂಭದಲ್ಲಿ ಸ್ನಾನ ಮುಗಿಸಿ ಶುದ್ಧ ವಸ್ತ್ರದಲ್ಲಿ ತುಳಸಿ ಪೂಜೆ ಮುಗಿಸಿ, ವಿಘ್ನ ನಿವಾರಕನ ಪೂಜೆಗೆ ಅಣಿ ಮಾಡಿಕೊಳ್ಳಬೇಕು, ವರಮಹಾಲಕ್ಷ್ಮೀಯ ವೃತಗಳಲ್ಲಿ ಮಹಾಲಕ್ಷ್ಮಿಯ ಅಷ್ಟಲಕ್ಷ್ಮಿ ರೂಪಗಳಾದ ಆದಿಲಕ್ಷ್ಮೀ , ಧನಲಕ್ಷ್ಮಿ, ಧಾನ್ಯಲಕ್ಷ್ಮೀ, ಧೈರ್ಯ ಲಕ್ಷ್ಮಿ, ಗಜಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ, ಮತ್ತು ವಿದ್ಯಾಲಕ್ಷ್ಮಿಯನ್ನು ಆರಾಧಿಸಬೇಕು.
ಪೂಜೆಯ ಸ್ಥಳವನ್ನು ಶುದ್ದೀಕರಿಸಿ (ಸಗಣಿ ಬಳಸಿ ಶುದ್ಧ ಮಾಡುವ ಪ್ರತೀತಿಯಿದೆ) ತಳಿರು ತೋರಣಗಳನ್ನು ಕಟ್ಟಿ ಶೃಂಗಿರಿಸಿದ ನಂತರ ಅಷ್ಟದಳ ಪದ್ಮವ ಬಿಡಿಸಿ ಲಕ್ಷ್ಮೀಯನ್ನು ಕೂರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
ಸಂಕಲ್ಪ
ವೃತದ ಸಂಕಲ್ಪವನ್ನು ಕೈಗೊಂಡು ಅಂದರೆ, ವೃತ ಆಚರಣೆಯ ಪ್ರಾರ್ಥನೆಯನ್ನು ಅರ್ಥಾತ್ ಕ್ಷೇಮ ಸ್ಥೈರ್ಯ, ವಿಜಯ ವೀರ್ಯ ಆಯುರಾರೋಗ್ಯ ಅಭಿವೃದ್ಧ್ಯರ್ಥಂ, ಚತುರ್ವಿಧ ಪುರುಷಾರ್ಥ ಸಿದ್ಧ್ಯರ್ಥಂ, ಪುತ್ರಪೌತ್ರಾಭಿವೃದ್ಧ್ಯರ್ಥಂ, ಸಮಸ್ತ ದುರಿತೋಪಕ್ಷಯಾರ್ಥಂ, ಜ್ಞಾನ ಭಕ್ತಿ ವೈರಾಗ್ಯ ಸಿದ್ದ್ಯರ್ಥಂ, ಅಖಂಡ ಸೌಭಾಗ್ಯ ಪ್ರಾಪ್ಯರ್ಥಂ, ಅಸ್ಮತ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನಾರಾಯಣ ಪ್ರೀತ್ಯರ್ಥಂ ಎಂದು ಹೇಳಿ ಪರಮಾತ್ಮನ ಎಡತೊಡೆಯ ಮೇಲೆ ಲಕ್ಷ್ಮೀ ಕುಳಿತಿದ್ದಾಳೆಂದು ಅನುಸಂಧಾನ ಮಾಡಿ ಪೂಜೆಯನ್ನೂ ಆರಂಭಿಸುವುದು
ವಿಘ್ನ ನಿವಾರಕನಿಗೆ ಪೂಜೆ
ಮನೆಯ ಗೃಹಲಕ್ಷ್ಮೀ ಪತ್ನಿಯು ದೀಪವನ್ನು ಹಚ್ಚಿದರೆ, ಪತಿಯು ಘಂಟಾನಾದ ಮಾಡಿ, ಬಾಳೆ ಎಲೆಯ ಮೇಲೆ ಹರಿವಾಣವಿಟ್ಟು, ಅಕ್ಕಿಯನ್ನು ಹರಡಿ, ಕಲಶ ಕೂಡಿಸಿ, ಲಕ್ಷ್ಮೀದೇವಿಯನ್ನು ದೇವರನಾಮಗಳಿಂದ ಆಹ್ವಾನಿಸಬೇಕು. ಅಷ್ಟರಲ್ಲಿ ವಿಘ್ನನಿವಾರಕನಿಗೆ ಅಗ್ರಪೂಜೆಯನ್ನು ಸಲ್ಲಿಸಿ ಯಾವುದೇ ವಿಘ್ನ ಬಾರದಿರಲಿ ಎಂದು ಪ್ರಾರ್ಥಿಸಿಕೊಳ್ಳಬೇಕು
ಕಲಶ ಪ್ರತಿಷ್ಠಾಪನೆ ಮಾಡಿದ ಬಳಿಕ, ದೇವರಿಗೆ ಆಭರಣಗಳಿಂದ ಅಲಂಕರಿಸಬೇಕು. ಒಡವೆಗಳನ್ನು ಹಾಲಿನಲ್ಲಾಗಲೀ, ಅರಿಶಿನದ ನೀರಿನಲ್ಲಾಗಲೀ ನೆನೆಸಿ ತೊಳೆದು ದೇವರಿಗೆ ಸಮರ್ಪಿಸಿ ನಂತರ ಲಕ್ಷ್ಮಿಗೆ ಅಲಂಕರಿಸುವ ಪ್ರತೀತಿ ಇದೆ. ಬಳಿಕ ತಾವರೆ, ಮಲ್ಲಿಗೆ, ಗುಲಾಬಿ ಹೂವುಗಳಿಂದ ತಾಯಿಗೆ ಅಲಂಕರಿಸಲಾಗುತ್ತದೆ.
ಆನಂತರ ಲಕ್ಷ್ಮೀ ದೇವಿಯ ನಾಮಾವಳಿಗಳನ್ನು ಸ್ಮರಿಸುವುದು ಸೇರಿದಂತೆ ಮನಸ್ಪೂರ್ವಕವಾಗಿ ದೇವಿಯನ್ನು ಆರಾಧಿಸಿ ತದನಂತರ ಬಾಗೀನವನ್ನು ಕೊಟ್ಟು ವರಮಹಾಲಕ್ಷ್ಮೀಯ ವೃತವನ್ನು ಎಲ್ಲರೊಂದದಿಗೂ ಆಚರಿಸಲಾಗುತ್ತದೆ.
ವರಮಹಾಲಕ್ಷ್ಮೀಯ ಆಚರಣೆಯ ಕ್ರಮ ಹೀಗೆ ಇರಬೇಕು ಎಂಬ ನಿಯಮಾವಳಿಗಳಿಲ್ಲ. ಅವರವರ ಸಂಪ್ರದಾಯ ಹಾಗೂ ಪದ್ಧತಿಗಳಿಗೆ ತಕ್ಕಂತೆ ಪೂಜಾನುಕ್ರಮಗಳು ಸಹ ನಡೆಯುವುದು. ಈ ವೃತದಲ್ಲಿ ಮುಖ್ಯವಾಗಿ ಕಾಣುವುದು ಭಕ್ತಿಯ ವಿಶೇಷತೆ!

Varamahalakshmi festival, Varamahalakshmi Vratam,