Threat case ಶಿವಮೊಗ್ಗ: ನಗರದ ಆರ್.ಎಂ.ಎಲ್. ನಗರದಲ್ಲಿ ಗುಜುರಿ ವ್ಯಾಪಾರಿಯೊಬ್ಬರಿಗೆ 50 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿ, ಮನೆಯ ಹಾಗೂ ಅಂಗಡಿಯ ವಸ್ತುಗಳನ್ನು ನಾಶಪಡಿಸಿದ ಆರೋಪದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Threat case : ಎಫ್ಐಆರ್ನಲ್ಲಿ ಏನಿದೆ
ಆರ್.ಎಂ.ಎಲ್. ನಗರ ನಿವಾಸಿಯಾಗಿರುವ ಗುಜುರಿ ವ್ಯಾಪಾರಿಯೊಬ್ಬರು ಮನೆಯಲ್ಲಿ ಕುಳಿತಿದ್ದಾಗ, ಸುಮಾರು 5-6 ಯುವಕರು ಬಂದು ಅವರ ಅಣ್ಣನೊಂದಿಗೆ ಮಾತನಾಡಲು ಫೋನ್ ನೀಡಿದ್ದಾರೆ. ಫೋನ್ ತೆಗೆದುಕೊಂಡು ಮಾತನಾಡಿದಾಗ, ಆ ವ್ಯಕ್ತಿ ನನಗೆ ನೀನು 50 ಲಕ್ಷ ಹಣ ನೀಡಬೇಕು. ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಣ ನೀಡಲು ನಿರಾಕರಿಸಿದ ನಂತರ, ಅದೇ ರಾತ್ರಿ ಯುವಕರು ಮತ್ತೆ ಮನೆಗೆ ಬಂದು ಜಗಳ ಮಾಡಿ, ದೂರುದಾರರ ಅಳಿಯನಿಗೂ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ದೂರುದಾರರು ತಮ್ಮ ಸಂಬಂಧಿಕರ ಮನೆಗೆ ಹೋಗಿ ಉಳಿದುಕೊಂಡಿದ್ದಾರೆ. ಮರುದಿನ ನೆರೆಮನೆಯವರು ಕರೆ ಮಾಡಿ, ಅವರ ಮನೆಯ ವಸ್ತುಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮನೆಗೆ ಬಂದು ನೋಡಿದಾಗ 50 ಸಾವಿರ ಮೌಲ್ಯದ ವಸ್ತುಗಳನ್ನು ಹಾಳು ಮಾಡಿರುವುದು ಕಂಡುಬಂದಿದೆ.
ಇದಲ್ಲದೆ, ದೂರುದಾರರ ಅಳಿಯನ ಅಂಗಡಿಯ ಬಳಿಯೂ ಹೋಗಿ, ಹಣ ಕೊಡುವವರೆಗೂ ಅಂಗಡಿಯನ್ನು ತೆರೆಯಲು ಬಿಡುವುದಿಲ್ಲ ಎಂದು ಹೇಳಿ, ಡೆಸ್ಕ್‌ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.