C.S. Shadakshari ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಆಗಸ್ಟ್ 3 ರಂದು ಪ್ರತಿಭಾ ಪುರಸ್ಕಾರ : ಸಿ.ಎಸ್. ಷಡಾಕ್ಷರಿ
C.S. Shadakshari ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ 90 ಕ್ಕಿಂತ ಹೆಚ್ಚು ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಆಗಸ್ಟ್ 03 ರಂದು ಕುವೆಂಪು ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಎಸ್ ಷಡಾಕ್ಷರಿ ಹೇಳಿದರು.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾದ ನಂತರ 2019 ರಿಂದ ಈ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದ್ದೇವೆ. ಇದು ಆರನೇ ವರ್ಷದ ಕಾರ್ಯಕ್ರಮವಾಗಿದ್ದು, ಇದುವರೆಗೆ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದ್ದೇವೆ” ಎಂದರು.
ಈ ಬಾರಿ 18 ಜಿಲ್ಲೆಗಳಲ್ಲಿ ಪ್ರತಿಭಾ ಪುರಸ್ಕಾರವನ್ನು ಪೂರ್ಣಗೊಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿದ 400 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 1,500 ರೂಪಾಯಿ ನಗದು, ಸ್ಮರಣಿಕೆ, ಬ್ಯಾಗ್ ಹಾಗೂ ಪುಸ್ತಕವನ್ನು ನೀಡಲಾಗುವುದು. ಪ್ರತಿ ವರ್ಷ ಈ ಪ್ರತಿಭಾ ಪುರಸ್ಕಾರಕ್ಕಾಗಿ 3 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ ಎಂದು ಷಡಾಕ್ಷರಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ ಪ್ರತಿಭಾ ಪುರಸ್ಕಾರವನ್ನು ವಿತರಿಸುವರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಮತ್ತು ಶಾರದಾ ಪೂರ್‍ಯಾ ನಾಯ್ಕ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ವಹಿಸಲಿದ್ದು, ಟಿವಿ 9 ನ ಚೀಫ್ ಆಂಕರ್ ರಂಗನಾಥ ಭಾರದ್ವಾಜ್ ಪ್ರೇರಣಾ ನುಡಿಗಳನ್ನಾಡಲಿದ್ದಾರೆ. ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಉಪಸ್ಥಿತರಿರುವರು.
ಇದೇ ವೇಳೆ, ಎಂಎಲ್‌ಸಿಗಳಾದ ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಒ ಹೇಮಂತ್, ಎಸ್.ಪಿ. ಮಿಥುನ್ ಕುಮಾರ್, ಹಾಗೂ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಆಗಮಿಸಲಿದ್ದಾರೆ ಎಂದು ಷಡಾಕ್ಷರಿ ತಿಳಿಸಿದರು.


