Karnataka Caste Census : ರಾಜ್ಯದಲ್ಲಿ ಜಾತಿ ಜನಗಣತಿ ಸಮೀಕ್ಷೆಗೆ ಡೇಟ್ ಫಿಕ್ಸ್
ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ 15 ದಿನಗಳ ಕಾಲ ಜಾತಿ ಜನಗಣತಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಮೀಕ್ಷೆಯ ಪೂರ್ವಭಾವಿ ಸಿದ್ಧತೆಗಳನ್ನು ಈಗಲೇ ಆರಂಭಿಸುವಂತೆ ಅವರು ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಮೀಕ್ಷೆಯು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಂಡು ವರದಿ ಸಲ್ಲಿಸಬೇಕಿದೆ. ಜಾತಿ ತಾರತಮ್ಯ ನಿವಾರಣೆ ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದ್ದು, ರಾಜ್ಯದ ಸುಮಾರು 7 ಕೋಟಿ ಜನರ ಸಮೀಕ್ಷೆ ನಡೆಯಲಿದೆ. ಇದು ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ ಮತ್ತು ಜಮೀನುಗಳ ಕುರಿತ ಸಮಗ್ರ ಮಾಹಿತಿಯನ್ನು ಒಳಗೊಂಡಿರಲಿದೆ. ಈ ಸಮೀಕ್ಷಾ ವರದಿಯು ಮುಂದಿನ ಬಜೆಟ್ ಸಿದ್ಧಪಡಿಸಲು ಆಧಾರವಾಗಲಿದೆ.
Karnataka Caste Census : ಈ ಸಮೀಕ್ಷಾ ಕಾರ್ಯಕ್ಕೆ 1.65 ಲಕ್ಷ ಗಣತಿದಾರರು ಸೇರಿದಂತೆ ಮಾನವ ಸಂಪನ್ಮೂಲದ ಅವಶ್ಯಕತೆಯಿದೆ. ಈ ಕಾರ್ಯಕ್ಕೆ ಶಿಕ್ಷಕರ ಜೊತೆಗೆ ಇತರ ಇಲಾಖೆಗಳ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು. ಈ ಸಮೀಕ್ಷೆ ದೂರುಗಳಿಗೆ ಆಸ್ಪದವಿಲ್ಲದಂತೆ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು, ಯಾರೂ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದು ಅವರು ತಿಳಿಸಿದ್ದಾರೆ.


ಈ ಹಿಂದೆ ಕಾಂತರಾಜು ಆಯೋಗವು 54 ಪ್ರಶ್ನೆಗಳೊಂದಿಗೆ ಕೈಪಿಡಿ ಸಮೀಕ್ಷೆ ನಡೆಸಿತ್ತು. ಆದರೆ, ಈ ಬಾರಿ ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಸಚಿವರಾದ ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ಆರ್. ನಾಯಕ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
