Dharmastala : ಶಿವಮೊಗ್ಗ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದ್ದು, ಈ ಕುರಿತು ಎಸ್ಐಟಿ ಶೀಘ್ರವೇ ಮತ್ತು ನ್ಯಾಯಯುತವಾಗಿ ತನಿಖೆ ನಡೆಸಬೇಕೆಂದು ವಕೀಲರಾದ ಕೆ.ಪಿ ಶ್ರೀಪಾಲ್ ಹೇಳಿದರು.
ಇಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಧರ್ಮಸ್ಥಳದಲ್ಲಿ 2014ರವರೆಗೆ ಸ್ವಚ್ಛತಾ ಕಾರ್ಮಿಕನಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯೊಬ್ಬರು ನೂರಾರು ಶವಗಳನ್ನು ತಾನು ಮಣ್ಣು ಮಾಡಿದ್ದೇನೆ ಎಂದು ವಕೀಲರ ಮುಂದೆ ಹೇಳಿಕೆ ನೀಡಿದ್ದಾರೆ. ಆ ಕಾರ್ಮಿಕನು ಹೂತಿಟ್ಟಿದ್ದ ಶವಗಳಲ್ಲಿ 12 ರಿಂದ 15 ವರ್ಷದ ಬಾಲಕಿಯರೇ ಹೆಚ್ಚು ಎಂದು ಆತ ತಿಳಿಸಿದ್ದಾನೆ. ಈ ಕುರಿತಾಗಿ ಆತ ಹೂತಿಟ್ಟಿದ್ದ ಅಸ್ತಿಪಂಜರಗಳನ್ನು ಸೂಟ್ಕೇಸ್ನಲ್ಲಿ ತಂದು ಪೊಲೀಸರಿಗೆ ನೀಡಿದ್ದರೂ, ಪೊಲೀಸರು ಸರಿಯಾಗಿ ತನಿಖೆ ನಡೆಸಿರಲಿಲ್ಲ ಎಂದು ಶ್ರೀಪಾಲ್ ಆರೋಪಿಸಿದರು. ರಾಜ್ಯಾದ್ಯಂತ ಈ ಕುರಿತು ಚರ್ಚೆಗಳು ಹೆಚ್ಚಾದಾಗ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದು, ಈ ನಿರ್ಧಾರ ತೆಗೆದುಕೊಂಡ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿದರು.
Dharmastala ತ್ವರಿತ ವಾಗಿ ತನಿಖೆ ಆರಂಭಿಸುವ ಮೂಲಕ ಸಾಕ್ಷಿಯನ್ನು ರಕ್ಷಿಸಬೇಕು
ಎಸ್ಐಟಿ ಅಧಿಕಾರಿಗಳು ತುರ್ತಾಗಿ ಈ ಪ್ರಕರಣಗಳ ಬಗ್ಗೆ ತನಿಖೆ ಆರಂಭಿಸಬೇಕು ವಿಳಂಬವಾದರೆ ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ . ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳದಲ್ಲಿ 98 ಅಸಹಜ ಸಾವುಗಳು ಸಂಭವಿಸಿವೆ ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಸಹ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ರಾಜ್ಯ ಸರ್ಕಾರ ಎಸ್ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ತಿಳಿಸಿದರು.
1983ರಲ್ಲಿ ಬಂಗಾರಪ್ಪನವರು ಅವರು ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಅಸಹಜ ಸಾವುಗಳ ಬಗ್ಗೆ ಧ್ವನಿ ಎತ್ತಿದ್ದರು ಎಂದು ಶ್ರೀಪಾಲ್ ನೆನಪಿಸಿಕೊಂಡರು. ಆಗ ಲಂಕೇಶ್ ಪತ್ರಿಕೆ ಸೇರಿದಂತೆ ಇತರೆ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದ್ದವು. ಅದಾದ ನಂತರ, ಪ್ರಭಾವಿ ವ್ಯಕ್ತಿಗಳು ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದರು. ಇದರಿಂದಾಗಿ ಮಾಧ್ಯಮಗಳು ಸಹ ಸುದ್ದಿ ಪ್ರಸಾರ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
Dharmastala ಈ ತನಿಖೆ ಮೂಲಕ ನ್ಯಾಯದ ಸಂದೇಶ ರವಾನೆಯಾಗಬೇಕು
ನಂತರ ಡಿ.ಎಸ್. ಗುರುಮೂರ್ತಿ ಮಾತನಾಡಿ, ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ತನಿಖೆಗಾಗಿ ಎಸ್ಐಟಿ ರಚನೆ ಮಾಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಈ ತನಿಖೆ ಮೂಲಕ “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂಬ ಸಂದೇಶ ಎಲ್ಲೆಡೆ ರವಾನೆಯಾಗಬೇಕು ಎಂದರು
ಹಾಗೆಯೇ. ಈ ಹಿಂದೆ ಸಹ ನಾವು ಅನೇಕ ಬಾರಿ ಈ ಕುರಿತಾಗಿ ಧ್ವನಿ ಎತ್ತುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಎಸ್ಐಟಿ ಪ್ರಾಮಾಣಿಕ ತನಿಖೆ ನಡೆಸಿ, ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.


