Rashtrabhakta Balaga ಶಿವಮೊಗ್ಗ : ಶಿವಮೊಗ್ಗದ ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿರುವ ಜಾಗಕ್ಕೆ ಸಂಬಂಧಿಸಿದಂತೆ ವಕ್ಫ್ ಇಲಾಕೆ ಕಾನೂನು ಬಾಹಿರವಾಗಿ ಖಾತೆ ಮಾಡಿಕೊಂಡಿದ್ದು. ಅದನ್ನು ಕೂಡಲೇ ರದ್ದು ಮಾಡಿ ಈ ಅಕ್ರಮದಲ್ಲಿ ಶಾಮೀಲಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಭಕ್ತ ಬಳಗ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಆಟದ ಮೈದಾನದ ಹಕ್ಕುದಾರಿಕೆಯ ಬಗ್ಗೆ ರಾಷ್ಟ್ರಭಕ್ತ ಬಳಗವು ಈಗಾಗಲೇ ಪ್ರಮುಖ ದಾಖಲೆಗಳೊಂದಿಗೆ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ ಎಂದು ತಿಳಿಸಿದರು. ಆ ಜಾಗದ ಖಾತೆಯನ್ನು ನಿಯಮಬಾಹಿರವಾಗಿ ವಕ್ಫ್ ಹೆಸರಿಗೆ ಮಾಡಿದ್ದನ್ನು ಪ್ರಶ್ನಿಸಿ, ಪುನರ್ ಪರಿಶೀಲಿಸುವಂತೆ 2020ರ ನವೆಂಬರ್ 10ರಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಪಾಲಿಕೆ ಆಯುಕ್ತರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇದೀಗ ಮತ್ತೆ 2025ರ ಮೇ 22ರಂದು ಉಚ್ಚ ನ್ಯಾಯಾಲಯವು ಜಾಗದ ಹಕ್ಕುದಾರಿಕೆ ದಾಖಲಾತಿಗಳನ್ನು ಎಂಟು ವಾರಗಳ ಒಳಗೆ ಪರಿಶೀಲಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ನ್ಯಾಯಾಲಯ ಕೊಟ್ಟ ಈ ಅವಧಿಯು 2025ರ ಜುಲೈ 17ಕ್ಕೆ ಮುಗಿದಿರುತ್ತದೆ ಎಂದು ಈಶ್ವರಪ್ಪ ವಿವರಿಸಿದರು.

ಇದೀಗ ಜಾಗಕ್ಕೆ ಸಂಬಂಧಿಸಿದ ಯಾವ ದಾಖಲೆಗಳು ವಕ್ಫ್ ಮಂಡಳಿ ಬಳಿ ಇರುವುದಿಲ್ಲ. 1965ರ ಮೈಸೂರು ರಾಜ್ಯ ಪತ್ರದಲ್ಲಿ (ಗೆಜೆಟ್ ನೋಟಿಫಿಕೇಷನ್) ಇದೇ ಜಾಗ ಎಂದು ಪರಿಗಣಿಸಲು ಯಾವುದೇ ಚಕ್ಕುಬಂದಿಯನ್ನು ನಮೂದಿಸಿಲ್ಲ ಎಂಬುದು ಎಂದು ಬಳಗ ಹೇಳಿತು
Rashtrabhakta Balaga ದಾನವಾಗಿ ಬಂದ ಆಸ್ತಿಯನ್ನು ಮಾತ್ರ ವಕ್ಫ್ ಆಸ್ತಿ ಎನ್ನಬಹುದು
ಪ್ರಸ್ತುತ ಜಾಗದ ನೈಜ ಅಳತೆಯ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ವರದಿ ಕೇಳಿದ್ದರೂ ಇದುವರೆಗೆ ಪಾಲಿಕೆ ವರದಿ ನೀಡಿಲ್ಲ. ಅಲ್ಲದೆ, ಈ ಹಿಂದೆ ನೀಡಿದ್ದ ಸರ್ವೇ ವರದಿಯಲ್ಲಿ ಮೇಲಾಧಿಕಾರಿಯ ಸಹಿಯೇ ಇಲ್ಲ ಎಂದು ಅಂದಿನ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. 2031ನೇ ಇಸವಿವರೆಗಿನ ಸಿ.ಡಿ.ಪಿ. ಯೋಜನೆ ತಯಾರಿಸುವಾಗಲೂ ಸಹ ಸದರಿ ಜಾಗವನ್ನು ಕಡು ಹಸಿರು ಬಣ್ಣದಿಂದ ಗುರುತಿಸಿದ್ದು, ಆಟದ ಮೈದಾನ ಅಥವಾ ಪಾರ್ಕ್ ಎಂದು ನಮೂದಿಸಲಾಗಿದೆ. ವಕ್ಫ್ ನಿಯಮದ ಪ್ರಕಾರ ದಾನವಾಗಿ ಬಂದ ಆಸ್ತಿಯನ್ನು ಮಾತ್ರ ವಕ್ಫ್ ಆಸ್ತಿಯೆಂದು ಪರಿಗಣಿಸಲು ಅವಕಾಶವಿದೆ. ಆದರೆ, ಸದರಿ ಜಾಗವನ್ನು ಯಾರು, ಯಾವಾಗ, ಯಾರಿಗೆ ದಾನ ನೀಡಿದ್ದಾರೆಂಬ ಸಣ್ಣ ದಾಖಲೆಯೂ ಇರುವುದಿಲ್ಲ ಎಂದು ರಾಷ್ಟ್ರಭಕ್ತ ಬಳಗ ತಿಳಿಸಿದ್ದು, ಈ ಅಕ್ರಮಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಹಾಗೆಯೇ ಆ ಜಾಗ ಪಾಲಿಕೆ ಜಾಗವಾಗಿ ಉಳಿಯಬೇಕು ಎಂಬುದರ ಕುರಿತಾಗಿ ಜುಲೈ 21ರಂದು ಪಾಲಿಕೆ ಆಯುಕ್ತರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲಾಗುವುದು ಎಂದರು.
Rashtrabhakta Balaga ಶಾಸಕರ ಕ್ಷೇತ್ರದ ಅಭಿವೃದ್ಧಿಗೆ 1 ಕೋಟಿ ಕೊಡಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ವಿಧಾನಸಭಾ ಕ್ಷೇತ್ರದ ಶಾಸಕರಿಗೂ 50 ಕೋಟಿ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡುವುದಾಗಿ ಹೇಳಿದ್ದಾರೆ. ಆದರೆ, ಅವರು 50 ಕೋಟಿ ನೀಡುವುದಿರಲಿ, ಮೊದಲು ರಸ್ತೆಯ ಗುಂಡಿಗಳನ್ನು ಸರಿಪಡಿಸಲು ಒಂದು ಕೋಟಿ ರೂಪಾಯಿ ನೀಡಲಿ. ಆಗ ಅವರು ನಡೆಸಿದ ಸಾಧನ ಸಮಾವೇಶ ಜನರ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ವ್ಯಂಗ್ಯವಾಡಿದರು.
