Haratalu halappa ಶಿವಮೊಗ್ಗ: ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಾಗರ ಶಾಸಕರ ಗೈರು ಹಾಜರಿ ಹಾಗೂ ಅವರ ಹೇಳಿಕೆಗಳ ಕುರಿತು ಮಾಜಿ ಸಚಿವ ಹರತಾಳು ಹಾಲಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ಘಾಟನೆಗೆ ಹಾಜರಾಗದೇ, ಮುಜುಗರ ತರುವ ರೀತಿಯಲ್ಲಿ ನಡೆದುಕೊಂಡಿದ್ದಲ್ಲದೆ, ಮುಖ್ಯಮಂತ್ರಿಗಳನ್ನೂ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲಪ್ಪ, “ತಾಯಿ ಆಶೀರ್ವಾದದಿಂದ ಸೇತುವೆ ಉದ್ಘಾಟನೆ ಸುಸೂತ್ರವಾಗಿ ನಡೆದಿದೆ. ಗುದ್ದಲಿ ಪೂಜೆ ವೇಳೆ ಇದ್ದ ಮೂವರಾದ ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಹಾಗೂ ನಿತಿನ್ ಗಡ್ಕರಿ ಅವರೇ ಸೇತುವೆ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು” ಎಂದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಸಮನ್ವಯತೆ ಇರಬೇಕು ಎಂದು ಪ್ರತಿಪಾದಿಸಿದರು.
Haratalu halappa ಕೀಳರಿಮೆಯಿಂದಾಗಿ ಉಸ್ತುವಾರಿ ಸಚಿವರು ಬಂದಿಲ್ಲ: ಹಾಲಪ್ಪ
ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಸಮಯ ನೀಡಿ ಬರುತ್ತೇನೆ ಎಂದಿದ್ದರು. ಲೋಕೋಪಯೋಗಿ ಸಚಿವರು ಸಾಗರಕ್ಕೆ ಬಂದು ಕಾರ್ಯಕ್ರಮಕ್ಕೆ ಬಾರದೆ ವಾಪಾಸು ಹೋಗಿದ್ದಾರೆ. “ನಾನು ಇವರಿಬ್ಬರ (ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರು) ಬಗ್ಗೆ ಏನೂ ಆರೋಪಿಸಲು ಹೋಗುವುದಿಲ್ಲ” ಎಂದ ಹಾಲಪ್ಪ, “ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾಗರ ಶಾಸಕರು ಏನೂ ಮಾತನಾಡುತ್ತಿದ್ದೇವೆ ಎಂಬುದೇ ಅವರಿಗೆ ತಿಳಿದಿಲ್ಲ. ನಾನೇನು ಮಾಡಿಲ್ಲ, ನನ್ನಿಂದ ಸೇತುವೆಗೆ ಏನೂ ಮಾಡೋಕೆ ಆಗಿಲ್ಲ ಎಂಬ ಕಸಿವಿಸಿಯಿಂದ ಸಚಿವರಿಗೆ ಈ ರೀತಿ ಆಗಿರಬಹುದು. ಕಾರ್ಯಕ್ರಮಕ್ಕೆ ಮೋದಿಯಾದರೂ ಬರ್ಲಿ, ಯಾರಾದರೂ ಬರಲಿ, ಟ್ರಂಪ್ ಆದರೂ ಬರ್ಲಿ ಅಂತಾ ಹೇಳಿದವರು ಯಾಕೆ ಬರಲಿಲ್ಲ” ಎಂದು ಹಾಲಪ್ಪ ಪ್ರಶ್ನಿಸಿದರು. ಕೊನೆ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಬಾರದೇ “ವಿದ್ವಾಂಸಕ ಕೃತ್ಯ ಮಾಡಿದ ಹಾಗೆ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕೀಳರಿಮೆಯಿಂದಾಗಿ ಅವರು ಬಂದಿಲ್ಲ. ಕಾರ್ಯಕ್ರಮ ಸಂಘಟಿಸಿ ಅವರು ಉದ್ಘಾಟನೆ ಮಾಡಬೇಕಿತ್ತು” ಎಂದು ಆರೋಪಿಸಿದರು.
ಹಾಲಪ್ಪ, 15 ದಿನಗಳ ಹಿಂದೆ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲ ಕೃಷ್ಣ ಇಬ್ಬರೂ ಸೇತುವೆ ನೋಡಲು ಹೋಗಿದ್ದರು. ಅಷ್ಟೇ ಅಲ್ಲದೆ, ಅಂದು ಜುಲೈ 14 ರಂದು ಉದ್ಘಾಟನೆ ಮಾಡದಿದ್ದರೆ ನಾವೇ ಉದ್ಘಾಟನೆ ಮಾಡುತ್ತೇವೆ ಎಂದಿದ್ದರು. ಆದರೆ ಹಾಗೆ ಹೇಳಿದವರೇ ಉದ್ಘಾಟನೆಗೆ ಏಕೆ ಬರಲಿಲ್ಲ ಎಂಬುದು ಗೊತ್ತಿಲ್ಲ ಎಂದು ಹೇಳಿದರು. ಅಸಂಬದ್ಧವಾಗಿ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಾನು ಏನು ಮಾತನಾಡುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ ಎಂದ ಹಾಲಪ್ಪ, ಸಿಗಂದೂರು ಸೇತುವೆಗೆ ತಾನು ಏನೂ ಮಾಡಿಲ್ಲ ಎಂಬ ಕೀಳರಿಮೆ ಇರುವ ಕಾರಣ ಉದ್ಘಾಟನೆಗೆ ಬಂದಿಲ್ಲ ಎಂದು ಟೀಕಿಸಿದರು.


