mp renukacharya ಶಿವಮೊಗ್ಗ : ಭದ್ರಾ ಬಲದಂಡೆ ಕಾಮಗಾರಿ ವಿಚಾರವಾಗಿ ಜುಲೈ 9 ರಂದು ಬೆಳಿಗ್ಗೆ ಸಾಗರ ರಸ್ತೆಯಲ್ಲಿರುವ ಚೀಫ್ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದೇವೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಭದ್ರಾ ಬಲದಂಡೆ ಕುಡಿಯುವ ನೀರಿನ ಯೋಜನೆಗೆ ನೀರನ್ನು ಬಿಡುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ರೈತರಿಗೆ “ಮರ್ಮಾಘಾತ” ಉಂಟಾಗಿದೆ. ಈ ಹಿಂದೆ ಇದರ ವಿರುದ್ಧ ಹಲವು ಹಂತಗಳಲ್ಲಿ ಹೋರಾಟ ನಡೆಸಿದ್ದೆವು. ಆದರೆ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಲಿಲ್ಲ. ಜೂನ್ 21 ರಂದು ಭದ್ರಾ ನಾಲೆ ವೀಕ್ಷಣೆ, ಜೂನ್ 23 ರಂದು ಬೃಹತ್ ಹೋರಾಟ ನಡೆಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ರಕ್ಷಣಾ ಇಲಾಖೆ ಸರ್ಕಾರದ ಏಜೆಂಟ್ ಆಗಿ ಕಾರ್ಯನಿರ್ವಹಿಸಿತು. ನಾವು ಭಯೋತ್ಪಾದಕರಲ್ಲದಿದ್ದರೂ, ಸೆಕ್ಷನ್ 144 ಜಾರಿಗೊಳಿಸಿ ತಮ್ಮನ್ನು ಬಂಧಿಸಲಾಯಿತು. ಜೂನ್ 25 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಾಗ ತಮ್ಮ ಮುಖಂಡರ ಮೇಲೆ ಬಲವಂತವಾಗಿ ಹಲ್ಲೆ ನಡೆಸಲಾಯಿತು ಎಂದು ಅವರು ಆರೋಪಿಸಿದರು.
ನನ್ನನ್ನೂ ಒಳಗೊಂಡಂತೆ ಎಲ್ಲಾ ರೈತರನ್ನು ಪೊಲೀಸರು ಬಂಧಿಸಿದ್ದರು. ನಂತರ ಎಸ್ಪಿ ಮತ್ತು ಡಿಸಿ ಅವರೊಂದಿಗೆ ಮಾತುಕತೆ ನಡೆಸಲಾಗಿತ್ತು. ಈ ಹೋರಾಟ ಸ್ವಾರ್ಥಕ್ಕಾಗಿ ಅಲ್ಲ, ರೈತರ ಜೀವನಕ್ಕಾಗಿ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಜುಲೈ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಅವರು ಭರವಸೆ ನೀಡಿದ್ದರೂ, ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ನಂತರ ಕರಪತ್ರಗಳನ್ನು ಹಂಚುವ ಮೂಲಕ ಯೋಜನೆಯಿಂದ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲಾಗಿತ್ತು.
mp renukacharya ರಕ್ತ ಕ್ರಾಂತಿಯಾದರೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ
ಈ ವಿಚಾರವಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ, ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ” ಮುಖ್ಯಮಂತ್ರಿಗಳು ತಕ್ಷಣ ಭದ್ರಾ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಬೇರೆ ಬೇರೆ ಹಂತದ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ಈ ಭದ್ರಾ ಬಲದಂಡೆಯಲ್ಲಿ ಒಟ್ಟು 65 ಸಾವಿರ ಹೆಕ್ಟೇರ್ ಭೂಪ್ರದೇಶಕ್ಕೆ ನೀರನ್ನು ಬಿಡಬೇಕು. ಆದರೆ ಭತ್ತ ನಾಟಿ ಮಾಡುವ ಸಂಧರ್ಭ ಈಗ ರೈತರಿಗೆ ನೀರನ್ನು ಬಿಡುತ್ತಿಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಯಾರಿಗೂ ವೀಕ್ಷಿಸಲು ಬಿಡುತ್ತಿಲ್ಲ. “ರಕ್ತ ಕ್ರಾಂತಿಯಾದರೂ ಪರವಾಗಿಲ್ಲ, ಹೋರಾಟ ಮಾಡಿಯೇ ಮಾಡುತ್ತೇವೆ” ಎಂದು ಅವರು ತೀಕ್ಷ್ಣವಾಗಿ ನುಡಿದರು.
ಕುಡಿಯುವ ನೀರಿಗೆ ತಮ್ಮ ವಿರೋಧವಿಲ್ಲ. 7 ಟಿಎಂಸಿ ನೀರು ಕುಡಿಯುವುದಕ್ಕಾಗಿ ಮೀಸಲಿಟ್ಟಿದ್ದು, ಅದನ್ನು ಜಾಕ್ವೆಲ್ ಮೂಲಕ ಕುಡಿಯಲು ಬಿಡುಗಡೆ ಮಾಡಬಹುದು. ಆದರಿಂದ. ತಕ್ಷಣ ಕಾಮಗಾರಿ ನಿಲ್ಲಿಸಿ ತಡೆಗೋಡೆ ಕಟ್ಟಬೇಕು. ಎಂದು ಆಗ್ರಹಿಸಿದರು
mp renukacharya ಸುರ್ಜೇವಾಲಾ ರಾಜ್ಯ ಭೇಟಿ ಮತ್ತು ಕಾಂಗ್ರೆಸ್ ಆಂತರಿಕ ಕಲಹ
ಸುರ್ಜೇವಾಲಾ ಅವರ ರಾಜ್ಯ ಭೇಟಿ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕರೇ ತಮ್ಮದೇ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದಾರೆ. ಸರಣಿ ಸಭೆಗಳು ನಡೆಸಿದರೂ ಕುರ್ಚಿ ಕದನ ನಿಲ್ಲಲಿಲ್ಲ. ಸುರ್ಜೇವಾಲಾ ಎಷ್ಟೇ ತೇಪೆ ಹಚ್ಚಿದರೂ ಶಾಸಕರ ಮನ ಒಲಿಸಲು ಸಾಧ್ಯವಾಗಲಿಲ್ಲ. ಯಾರೇ ಎಷ್ಟೇ ಪ್ರಯತ್ನಪಟ್ಟರೂ ಆಂತರಿಕ ಕಚ್ಚಾಟದಿಂದ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.
mp renukacharya ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ:
ರಾಜ್ಯಾಧ್ಯಕ್ಷ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ವಿಜಯೇಂದ್ರ ಅವರನ್ನು ಹೈಕಮಾಂಡ್ ನೇಮಕ ಮಾಡಿದೆ. ಅವರು ರಾಜ್ಯದಾದ್ಯಂತ ಪಾರದರ್ಶಕವಾಗಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಅವರದ್ದೇ ಆದ ವರ್ಚಸ್ಸು ಇದೆ. ವಿಜಯೇಂದ್ರ ಅವರು ಕಿರಿಯ ವಯಸ್ಸಿನಲ್ಲಿ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮೂಡಾ ವಾಲ್ಮೀಕಿ ಹಗರಣದಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. 2028 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಅವರ ಕನಸಿಗೆ ನಾವೆಲ್ಲ ಒಗ್ಗಟ್ಟಾಗಿ ನಿಲ್ಲುತ್ತೇವೆ. ಅವರನ್ನೇ ಮುಂದುವರಿಸಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ರೇಣುಕಾಚಾರ್ಯ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷ ಹರಕೆರೆ ನಾಗರಾಜ್, ಹೊನ್ನಾಳಿ ಕುಬೇಂದ್ರಪ್ಪ, ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.