Kanthara chapter 1 new poster : ಕಾಂತಾರ ಚಾಪ್ಟರ್ 1 ಹೊಸ ಪೋಸ್ಟರ್ ರಿಲೀಸ್ : ಹೇಗಿದೆ ರಿಷಬ್ ಲುಕ್
Kanthara chapter 1 new poster : ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು ತಮ್ಮ 42ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ‘ಕಾಂತಾರ ಚಾಪ್ಟರ್ 1’ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದೆ. ಚಿತ್ರದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬೆಂಕಿಯ ನಡುವೆ, ದಾಳಿಗಳನ್ನು ಎದುರಿಸಿ, ಕೊಡಲಿ ಹಿಡಿದು ಮುನ್ನುಗ್ಗುತ್ತಿರುವ ರಿಷಬ್ ಶೆಟ್ಟಿ ಅವರ ಈ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
‘ಕಾಂತಾರ’ ಚಿತ್ರದ ಮೂಲಕ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದರು. ಈ ಚಿತ್ರದ ಯಶಸ್ಸು ಅವರನ್ನು ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಆಗಿ ಪರಿವರ್ತಿಸಿತು. ಈ ಭಾರಿ ಯಶಸ್ಸಿನ ನಂತರ, ರಿಷಬ್ ಶೆಟ್ಟಿ ‘ಕಾಂತಾರ‘ ಪ್ರೀಕ್ವೆಲ್ (ಕಾಂತಾರ ಚಾಪ್ಟರ್ 1) ಘೋಷಿಸಿದರು. ಸಾಮಾನ್ಯವಾಗಿ ಸೀಕ್ವೆಲ್ ಅಥವಾ ಚಾಪ್ಟರ್ 2 ಮೇಲೆ ನಿರೀಕ್ಷೆ ಇರುತ್ತದೆ, ಆದರೆ ಇದು ಪ್ರೀಕ್ವೆಲ್ ಆಗಿರುವುದರಿಂದ ಚಿತ್ರದ ಬಗ್ಗೆ ಭಾರೀ ಕುತೂಹಲವಿದೆ. ಚಿತ್ರತಂಡ ಒಂದು ಸಣ್ಣ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿದಾಗಲೇ ನಿರೀಕ್ಷೆ ದುಪ್ಪಟ್ಟಾಗಿತ್ತು. ಈಗ ಬಿಡುಗಡೆಯಾಗಿರುವ ಮತ್ತೊಂದು ಹೊಸ ಪೋಸ್ಟರ್‌ಗೆ “ದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ” ಎಂಬ ಆಕರ್ಷಕ ಕ್ಯಾಪ್ಷನ್ ನೀಡಲಾಗಿದೆ.
ಚಿತ್ರೀಕರಣದ ವೇಳೆ ಸಾಲು ಸಾಲು ಸಮಸ್ಯೆಗಳು ಎದುರಾಗಿದ್ದರಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ, ಈ ಹೊಸ ಪೋಸ್ಟರ್‌ನಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 2 ಎಂದು ಸ್ಪಷ್ಟವಾಗಿ ಘೋಷಿಸುವ ಮೂಲಕ ಚಿತ್ರತಂಡ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಇದು ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯಾಗಿದೆ.

