rice transportation : ಜುಲೈ 07, ರಾಜ್ಯಾದ್ಯಂತ ಪಡಿತರ ಅಕ್ಕಿ ಸಾಗಣೆ ಸ್ಥಗಿತ : ಲಾರಿ ಮಾಲೀಕರಿಂದ ಈ ನಿರ್ದಾರಕ್ಕೆ ಕಾರಣವೇನು
rice transportation : ಶಿವಮೊಗ್ಗ, ಕಳೆದ ಆರು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಹಣ ಪಾವತಿಸದ ಹಿನ್ನೆಲೆಯಲ್ಲಿ, ಜುಲೈ ತಿಂಗಳಿನಿಂದ ಪಡಿತರ ಅಕ್ಕಿ ಸಾಗಣೆ ಕಾರ್ಯವನ್ನು ಸ್ಥಗಿತಗೊಳಿಸುವುದಾಗಿ ಶಿವಮೊಗ್ಗ ಜಿಲ್ಲೆಯ ಸಗಟು ಮತ್ತು ಚಿಲ್ಲರೆ ಪಡಿತರ ಸಾಗಾಣಿಕೆ ಗುತ್ತಿಗೆದಾರರ ಜಿಲ್ಲಾಧ್ಯಕ್ಷ ಜಗನ್ನಾಥ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬಾಕಿ ಹಣ ಪಾವತಿಯಾಗುವವರೆಗೂ ಲಾರಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗನ್ನಾಥ್, “ನಾವು ಫೆಬ್ರವರಿಯಿಂದ ಜೂನ್ ತಿಂಗಳವರೆಗೆ ಪಡಿತರ ಸಾಗಣೆ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ. ಆದರೆ, ಕಳೆದ ಆರು ತಿಂಗಳಿಂದ ರಾಜ್ಯದಾದ್ಯಂತ ಯಾವುದೇ ಲಾರಿ ಮಾಲೀಕರಿಗೂ ರಾಜ್ಯ ಸರ್ಕಾರ ಹಣ ನೀಡಿಲ್ಲ,” ಎಂದು ಹೇಳಿದರು.
ಈ ಕುರಿತು ಕಳೆದ ಜೂನ್ ತಿಂಗಳಿನಲ್ಲಿ ಸರ್ಕಾರದ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ, ಇದುವರೆಗೂ ಹಣ ಪಾವತಿಯಾಗಿಲ್ಲ. ಇದರಿಂದಾಗಿ ಕಾರ್ಯ ನಿರ್ವಹಿಸಲು ಹಣದ ಕೊರತೆ ಉಂಟಾಗಿದ್ದು, ಹಣ ಬಿಡುಗಡೆಯಾಗುವವರೆಗೂ ರಾಜ್ಯಾದ್ಯಂತ ಯಾವುದೇ ಪಡಿತರವನ್ನು ಸಾಗಿಸುವುದಿಲ್ಲ ಎಂದು ಜಗನ್ನಾಥ್ ಸ್ಪಷ್ಟಪಡಿಸಿದರು.

ಸದ್ಯ, ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿ ಪಡಿತರ ಸಾಗಾಣಿಕೆ ಮಾಲೀಕರಿಗೆ ಸರ್ಕಾರ 10 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಇಡೀ ರಾಜ್ಯದಾದ್ಯಂತ ಈ ಬಾಕಿ ಮೊತ್ತ 250 ಕೋಟಿ ರೂಪಾಯಿ ಎಂದು ಅವರು ಮಾಹಿತಿ ನೀಡಿದರು.