SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 8, 2025
ಗಬಡಿ ಪ್ರತಾಪ್ ವರದಿ
ತುಳುನಾಡಿದ ಜನಪ್ರಿಯ ಕ್ರೀಡೆಗಳಲ್ಲಿ ಕಂಬಳ ವಿಶೇಷವಾದುದು. ಕರಾವಳಿಯಷ್ಟೆ ಅಲ್ಲದೆ ವಿಶ್ವದಾದ್ಯಂತ ಕಂಬಳಕ್ಕೆ ಹೆಸರಿದೆ. ಮಾಲೀಕನ ಹೆಸರುಳಿಸಲು ಉಸಿರು ಕಟ್ಟಿ ಓಡುವ ಆಳೆತ್ತರದ ಕೋಣಗಳು, ಅದನ್ನು ಓಡಿಸುವ ಜಾಕಿ, ಅಲ್ಲಿ ನೆರೆದಿರುವ ಜನ ಹಾಗೂ ಅಲ್ಲಿರುವ ವಾತಾವರಣವನ್ನೂ ನೋಡಲೆರಡು ಕಣ್ಣು ಸಾಲದು. ಕಂಬಳ ಎಂದರೇನು, ಇಷ್ಟು ಪ್ರಸಿದ್ಧಿ ಹೊಂದಿರುವ ಕಂಬಳದ ಹಿನ್ನಲೆ ಏನು, ಆದರ ವಿಧಗಳಾವುವು, ಶಿವಮೊಗ್ಗದಲ್ಲಿ ಕಂಬಳ ಹೇಗೆ ನಡೆಯುತ್ತದೆ, ಕೋಣಗಳನ್ನು ಕಂಬಳಕ್ಕೆ ಯಾವರೀತಿ ರೆಡಿ ಮಾಡಲಾಗುತ್ತದೆ, ಆದರ ವಿಧಗಳಾವುವು ಎಂಬೆಲ್ಲಾ ವಿಚಾರಗಳ ಸಣ್ಣದೊಂದು ಲೇಖನ.
ಕಂಬಳ ಎಂದರೇನು..?
ತುಳು ಭಾಷೆಯಲ್ಲಿ ಈ ಮೊದಲು ಈ ಕ್ರೀಡೆಯನ್ನು ಕಂಬಲ ಎಂದು ಕರೆಯಲಾಗುತ್ತಿತ್ತು. ಕಾಲ ನಂತರದಲ್ಲಿ ಅದನ್ನು ಕಂಬಲ ಹೋಗಿ ಕಂಬಳ ಎಂದು ಕರೆಯಲಾಯಿತು. ಕಂಬಲ ಎಂದರೆ ತುಳುವಿನಲ್ಲಿ ಕೆಸರು ಗದ್ದೆ ಎಂದರ್ಥ. ಗದ್ದೆಯ ಕೊಯ್ಲಿನ ನಂತರ ಬಿಡುವಾದ ಗದ್ದೆಯನ್ನು ಹದ ಮಾಡಿ ಕಂಬಳವನ್ನು ನಡೆಸಲಾಗುತ್ತದೆ.
ದಕ್ಷಿಣ ಕನ್ನಡ ಉಡುಪಿಗೆ ಸೀಮಿತವಾಗಿದ್ದ ಕಂಬಳ ಆನಂತರದಲ್ಲಿ ರಾಜ್ಯದ ಉಳಿದೆಡೆ ವಿಸ್ತರಣೆಯಾಗುತ್ತಿದೆ. ಈ ಹಿಂದೆ ಬೆಂಗಳೂರಿನಲ್ಲಿ ಕಂಬಳ ನಡೆದಿದ್ದು ಗೊತ್ತಿರಬಹುದು. ಇದೀಗ ಏಪ್ರಿಲ್ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ಸಹ ಮೊದಲ ಬಾರಿಗೆ ಕಂಬಳ ಕ್ರೀಡೆಯನ್ನು ಆಡಿಸಲಾಗುತ್ತಿದೆ.
ಕಂಬಳ “ಕೋಣದ ಮಾಲೀಕರ ಪ್ರತಿಷ್ಠೆಯ ಸ್ಪರ್ಧೆ”
ಉತ್ತರ ಕರ್ನಾಟಕದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಹೇಗೆ ಮಾಲೀಕರ ಪ್ರತಿಷ್ಠೆಯ ಸ್ಪರ್ದೆಯನ್ನಾಗಿ ಆಡಿಸಲಾಗುತ್ತಯೋ ಅದೇ ರೀತಿ ದಕ್ಷಿಣ ಕನ್ನಡದಲ್ಲಿಯೂ ಸಹ ಕಂಬಳವನ್ನು ಮಾಲೀಕರ ಪ್ರತಿಷ್ಠೆಯ ಸ್ಪರ್ಧೆಯನ್ನಾಗಿ ಪರಿಗಣಿಸಲಾಗಿದೆ. ಕೋಣದ ಮಾಲೀಕರನ್ನು ಗುತ್ತುದ ಮನೆಯವರು ಎಂದು ಕರೆಯಲಾಗುತ್ತದೆ. ಅವರು ಕೋಣಗಳನ್ನು ವರ್ಷವಿಡೀ ಉತ್ತಮ ರೀತಿಯಲ್ಲಿ ಹುರುಳಿ ಸೇರಿದಂತೆ ಮುಂತಾದ ತಿನಿಸುಗಳನ್ನು ತಿನ್ನಿಸಿ ದಷ್ಟಪುಷ್ಟವಾಗಿ ಬೆಳೆಸಿರುತ್ತಾರೆ. ಕೆಲವೊಬ್ಬರು ಕೋಣಗಳಿಗೆ ಬೇಸಿಗೆ ಕಾಲದಲ್ಲಿ ಏಸಿಯನ್ನು ಸಹ ಹಾಕಿ ಸೆಕೆಯಾಗದಂತೆ ನೋಡಿಕೊಳ್ಳುತ್ತಾರೆ. ಒಂದು ಕೋಣವನ್ನು ಸಾಕಲು ದಿನಕ್ಕೆ 2000 ಸಾವಿರದ ವರೆಗೆ ಖರ್ಚಾಗುತ್ತದೆ ಎಂಬುದು ಕಂಬಳ ಮಾಲೀಕರ ಲೆಕ್ಕಾಚಾರ. ಅದೇರೀತಿ ಅವುಗಳಿಗೆ ಉತ್ತಮ ತರಬೇತಿಯನ್ನು ಸಹ ನೀಡಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಕೋಣಗಳು ಸಹ ಮಾಲೀಕರ ಹೆಸರುಳಿಸಲು ಉಸಿರುಗಟ್ಟಿ ಓಡಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತವೆ.
ಕಂಬಳದ ಹಿನ್ನಲೆ ಏನು..?
ಹಿಂದೆಲ್ಲಾ ರಾಜ ಮಹಾರಾಜರು ಭತ್ತದ ಕೊಯ್ಲಿನ ನಂತರ ಗದ್ದೆಯಲ್ಲಿ ಈ ಕಂಬಳವನ್ನು ನಡೆಸುತ್ತಿದ್ದರು. ಅದರಲ್ಲಿ ವಿಜೇತರಾದವರಿಗೆ ಉತ್ತಮ ಬಹುಮಾನಗಳನ್ನು ನೀಡುತ್ತಿದ್ದರು. ಕಾಲಾನಂತರ ಅದೇ ವಾಡಿಕೆ ಈಗಲೂ ಮುಂದುವರೆದು ಕೊಂಡು ಬಂದಿದೆ. ಚಳಿಗಾಲದಲ್ಲಿ ಅಂದರೆ ನವಂಬರ್ ಡಿಸೆಂಬರ್ ತಿಂಗಳಲ್ಲಿ ಆರಂಭವಾಗುವ ಈ ಕ್ರೀಡೆ ಬೇಸಿಗೆ ಆರಂಭಕ್ಕೂ ಮುನ್ನ ಅಂದರೆ ಜನವರಿ ಫೆಬ್ರವರಿ ಒಳಗೆ ಮುಗಿಯುತ್ತದೆ.
ಕಂಬಳದ ವಿಧಗಳು ಯಾವುವು.?
ಕಂಬಳದಲ್ಲಿ ಸಾಮಾನ್ಯವಾಗಿ ನಾವು ಎರಡು ವಿಧಗಳನ್ನು ನೋಡಬಹುದು ಒಂದು ಒಂಟಿ ಗದ್ದೆಯ ಕಂಬಳ ಇನ್ನೊಂದು ಜೋಡುಕರೆ ಕಂಬಳ. ಜೋಡುಕರೆ ಕಂಬಳ ಎಂದರೆ ಕೋಣಗಳನ್ನು ಎರಡು ಟ್ರ್ಯಾಕ್ ಗಳಲ್ಲಿ ಓಡಿಸಲಾಗುತ್ತದೆ. ಅದರಲ್ಲಿ ಯಾವ ಕೋಣ ಬೇಗ ಮಾವಿನ ತೋರಣ ಹಾಕಿದ ಗೆರೆ ಮುಟ್ಟುತ್ತದೆಯೂ ಆ ಕೋಣವನ್ನು ವಿಜೇತ ಕೋಣವೆಂದು ಘೋಷಿಸಲಾಗುತ್ತದೆ. ಒಂಟಿ ಗದ್ದೆಯ ಕಂಬಳ ಎಂದರೆ ಕೋಣವನ್ನು ಒಂದು ಟ್ರ್ಯಾಕ್ ನಲ್ಲಿ ಓಡಿಸಲಾಗುತ್ತದೆ. ಅದಕ್ಕೆ ಸಮಯವನ್ನು ನಿಗದಿಪಡಿಸಲಾಗುತ್ತದೆ. ಯಾವ ಕೋಣ ಇತರ ಕೋಣಗಳಿಗಿಂಗತಾ ಕಡಿಮೆ ಅವಧಿಯಲ್ಲಿ ಗೆರೆಯನ್ನು ತಲುಪುತ್ತದೆಯೋ ಆ ಕೋಣವನ್ನು ವಿಜೇತ ಕೋಣವೆಂದು ಘೋಷಿಸಲಾಗುತ್ತದೆ.
ಶಿವಮೊಗ್ಗದಲ್ಲಿ ಹೇಗೆ ನಡೆಯುತ್ತೆ ಕಂಬಳ| ಕಂಬಳ ನಡೆಸಲು ಆಗುವ ಖರ್ಚುಗಳೆಷ್ಟು
ಈ ಕ್ರೀಡೆ ತುಳುನಾಡಿನ ಜನರಿಗೆ ಕೇವಲ ಒಂದು ಕ್ರೀಡೆಯಲ್ಲ ಅದೊಂದು ಆಚರಣೆ. ಆ ಆಚರಣೆ ಇದೀಗ ವಿಶ್ವದಾದ್ಯಂತ ಪರಿಚಿತವಾಗಿದೆ. ಕರಾವಳಿ ಭಾಗದಲ್ಲಿ ಅಷ್ಟೇ ಅಲ್ಲದೆ ರಾಜ್ಯದ ನಾನಾ ಕಡೆಯಲ್ಲಿ ಈ ಕಂಬಳ ಕ್ರೀಡೆಯನ್ನು ಈಗ ನಡೆಸಲಾಗುತ್ತಿದೆ. ಈ ಕ್ರೀಡೆ ಇದೀಗ ಪ್ರಪ್ರಥಮ ಬಾರಿಗೆ ಮಲೆನಾಡಿಗೂ ಕಾಲಿಟ್ಟಿದ್ದು, ಏಪ್ರಿಲ್ 19,20 ರಂದು ಅದ್ದೂರಿಯಾಗಿ ಜೋಡುಕರೆ ಕಂಬಳ ಶಿವಮೊಗ್ಗ – ಭದ್ರಾವತಿ ರಸ್ತೆಯ ಮಾಚೇನಹಳ್ಳಿ ಸಮೀಪದ ಜಯಲಕ್ಷ್ಮಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಸುಮಾರು 16 ಎಕರೆ ಜಾಗದಲ್ಲಿ ನಡೆಯಲಿದೆ. ಆಯೋಜಕರ ಪ್ರಕಾರ ಈ ಕಂಬಳಕ್ಕೆ 6 ಕೋಟಿ ರೂಪಾಯಿ ಖರ್ಚಾಗುತ್ತಿದ್ದು, ಬರೊಬ್ಬರಿ 100 ಚಾಂಪಿಯನ್ ಕೋಣಗಳು ಈ ಸ್ಫರ್ಧೆಯಲ್ಲಿ ಭಾಗವಹಿಸಲಿವೆ. 2 ದಿನದಲ್ಲಿ 33 ಗಂಟೆಗಳ ಕಾಲ ನಡೆಯುವ ಈ ಕಂಬಳದಲ್ಲಿ ನಟ, ಸಂಗೀತ ನಿರ್ದೇಶಕ ಗುರುಕಿರಣ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ.ಮೋಹನ್ ಆಳ್ವ ಸೇರಿದಂತೆ ಹಲವರು ಗಣ್ಯರು ಭಾಗವಹಿಸಲಿದ್ದಾರೆ. ಈ ಕಂಬಳವನ್ನು ಕಣ್ತುಂಬಿ ಕೊಳ್ಳಲು ಮಲೆನಾಡಿಗರು ಕಾತರದಿಂದ ಕಾದು ಕುಳಿತಿದ್ದಾರೆ.
SUMMARY | What is the background of Kambala how kambala is held in Shimoga
KEYWORDS | Kambala, Shimoga, sports,