SHIVAMOGGA | MALENADUTODAY NEWS | ಮಲೆನಾಡು ಟುಡೆ
ಶಿವಮೊಗ್ಗ | ಫೆಬ್ರವರಿ 14ರಿಂದ 16ರ ವರೆಗೆ ಆರ್ಯವೈಶ್ಯ ಮಹಾಜನ ಸಮಿತಿ ವತಿಯಿಂದ ಶತಮಾನೋತ್ಸವ ಸಂಭ್ರಮ ಹಾಗೂ ಸುವರ್ಣ ಸೀರೆ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಿ.ಎಸ್. ಅರುಣ್ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್ಯವೈಶ್ಯ ಮಹಾಜನ ಸಮಿತಿಯು ಹಲವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈಗ ಶತಮಾನೋತ್ಸವದ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದರು.
ಫೆಬ್ರವರಿ 14ರಂದು ಬೆಳಗ್ಗೆ 7.30ರಿಂದ ಮಧ್ಯಾಹ್ನದವರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‍ನಲ್ಲಿ ವಾಸವಿ ವ್ರತ, ಹೋಮ ಹಾಗೂ ಸಮಾಜದ ಪದ್ಧತಿಯಂತೆ 102 ದಂಪತಿಗಳೊಂದಿಗೆ 102 ದಿನಗಳ ವಾಸವಿ ಚರಿತ್ರೆ ಸಾಮೂಹಿಕ ಪಾರಾಯಣದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಸಂಜೆ 7 ಗಂಟೆಗೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಮುಂಭಾಗ ದೀಪೋತ್ಸವ ಮತ್ತು ಆಶೀರ್ವಚನವನ್ನು ಏರ್ಪಡಿಸಲಾಗಿದೆ ಎಂದರು.
ಫೆ. 15 ರಂದು ಬೆಳಗ್ಗೆ 7.30ರಿಂದ ಮಧ್ಯಾಹ್ನ 1.30ರವರೆಗೆ ಷಷ್ಠಿಪೂರ್ತಿ ಮಹೋತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮದುವೆಯಾಗಿ 60 ವರ್ಷ ತುಂಬಿದ 27 ದಂಪತಿಗಳಿಗೆ ಷಷ್ಠಿ ಪೂರ್ತಿಯನ್ನು ಸಮಿತಿ ವತಿಯಿಂದಲೇ ಆಚರಿಸಲಾಗುವುದು. ಹಾಗೆಯೇ ಸಮಜೆ 6 ಗಂಟೆಗೆ ದೇವಸ್ಥಾನದ ಮುಂಭಾಗ ಅಮ್ಮನವರಿಗೆ ವಿಶೇಷ ಉಯ್ಯಾಲೋತ್ಸವ ನಡೆಯಲಿದೆ. ಮತ್ತು 7.30ಕ್ಕೆ ಬೆಂಗಳೂರಿನ ವಾಸವಿ ಪೀಠಂನ ಪೀಠಾಧ್ಯಕ್ಷ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಚನ ನಡೆಯಲಿದೆ ಎಂದರು.
ಫೆ. 16ರಂದು ಬೆಳಗ್ಗೆ 8 ಗಂಟೆಗೆ ಅಮ್ಮನವರಿಗೆ ಸುಮಾರು ಅರ್ಧ ಕೆಜಿ ಬಂಗಾರವಿರುವ 35 ಲಕ್ಷ ರೂ. ಬೆಲೆ ಬಾಳುವ ಬಂಗಾರದ ಸೀರೆ ಸಮರ್ಪಿಸಲಾಗುವುದು. ನಂತರ 9 ಗಂಟೆಗೆ ಭವ್ಯ ಮೆರವಣಿಗೆ ಮೂಲಕ ಶತಮಾನೋತ್ಸವದ ಸಮಾರೋಪ ಸಮಾರಂಭ ನಡೆಯುವ ಕುವೆಂಪು ರಂಗಮಂದಿರಕ್ಕೆ ತೆರಳಲಾಗುವುದು ಎಂದರು.
ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಶತಮಾನೋತ್ಸವ ಸಮಾರಂಭವನ್ನು ಬೆಂಗಳೂರಿನ ಬ್ರಿಗೇಡ್ ಗ್ರೂಪ್ ಸಿಎಂಡಿ ಎಂ.ಆರ್. ಜೈಶಂಕರ್ ಉದ್ಘಾಟಿಸುವರು. ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಧನಂಜಯ ಸರ್ಜಿ, ಡಿ.ಎಸ್. ಅರುಣ್, ಆರ್ಯ ವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್, ಜಿಲ್ಲಾಧ್ಯಕ್ಷ ಭೂಪಾಳಂ ಎಸ್. ಶಶಿಧರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸಂಜೆ 5.30ಕ್ಕೆ ಮಂಜರಿ ಚಂದ್ರ ಪುಷ್ಪರಾಜ್ ಅವರ ನೇತೃತ್ವದಲ್ಲಿ ನೃತ್ಯ, ಮತ್ತು ಶಿವಮೊಗ್ಗದ ಸಹಚೇತನ ನಾಟ್ಯಾಲಯದ ವತಿಯಿಂದ ವಿಶೇಷ ಸಾಂಸ್ಕತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
SUMMARY | Arya Vaishya Mahajana Samiti has organised centenary celebrations and golden saree dedication ceremony
KEYWORDS | Arya Vaishya Mahajana Samiti, centenary celebrations, shivamogga,