SHIVAMOGGA | MALENADUTODAY NEWS | ಮಲೆನಾಡು ಟುಡೆ Jan 14, 2025
ಸಮಾಜದ ಕಡೆ ಮುಖಮಾಡಿರುವ ಪತ್ರಕರ್ತರ ಬದುಕು ಬವಣೆಗಳನ್ನು ಕೇಳುವವರು ಬಹಳ ಕಡಿಮೆ. ಅದರಲ್ಲಿಯು ತಮ್ಮ ಏಳಿಗೆಯ ಜೊತೆಜೊತೆಗೆ, ಹೆಸರು ಗಳಿಸಲು ಪ್ರತಿದಿನ ಸುದ್ದಿ ಅರಸುವ ಪತ್ರಕರ್ತರ ಆರೋಗ್ಯದ ಪ್ರಶ್ನೆ ಆಘಾತಕಾರಿಯಾಗಿಯೇ ಇರುತ್ತದೆ. ಇದಕ್ಕಿಂತ ಕೆಟ್ಟ ಸಂದರ್ಭ ಅಂದರೆ ಅನಾರೋಗ್ಯದ ಸಂದರ್ಭದಲ್ಲಿ ಪತ್ರಕರ್ತರನ್ನ ಅವರನ್ನು ನಿಯೋಜಿಸಿದ ಸಂಸ್ಥೆಗಳು ನಡೆದುಕೊಳ್ಳುವ ರೀತಿ. ಅನಾರೋಗ್ಯ ಪೀಡಿತ ಪತ್ರಕರ್ತನನ್ನು ಸುದ್ದಿ ಸಂಸ್ಥೆ ಕೈ ಬಿಟ್ಟಾಗ, ಆತನದ್ದು ಅನಾಥ ಮಗುವಾದ ಸ್ಥಿತಿ. ಇಂತಹ ಪರಿಸ್ಥಿತಿಯನ್ನು ಎದುರಿಸಿ ಮರೆಯಾದ ಹಲವು ಜರ್ನಲಿಸ್ಟ್‌ಗಳ ಉದಾಹರಣೆ ವಾಟ್ಸಾಪ್ ಡಿಪಿ ಸ್ಟೇಟಸ್‌ಗಳ ಹೊರತಾಗಿ ಮೆತ್ತೆಲ್ಲೂ ಚರ್ಚೆಯಾದಂತಿಲ್ಲ.
ಸುದ್ದಿಲೋಕ ವಿಚಿತ್ರ ಅನಿವಾರ್ಯತೆ ಅಂದರೆ ಸುದ್ದಿ ಬೇಕಷ್ಟೆ, ಸುದ್ದಿಗಾರ ಇಲ್ಲಿ ಅಮುಖ್ಯ. ಈ ಕಾರಣಕ್ಕೆನೆ ಬಹುತೇಕ ಪತ್ರಕರ್ತರು ತಮ್ಮ ಅನಾರೋಗ್ಯವನ್ನು ಮುಚ್ಚಿಟ್ಟು, ತಮ್ಮ ಸಂಸ್ಥೆಗಳ ಜೊತೆಗೆ ಕೃತಕ ಸಂತೋಷದ ಐಡಿ ಕಾರ್ಡ್ ಹಾಕಿಕೊಂಡು ಕೆಲಸ ಮಾಡುತ್ತಿರುತ್ತಾನೆ. ಪರಪಂಚದ ಟೀಕೆ, ಸಂಸ್ಥೆಗಳ ಒತ್ತಡ, ಸಹೋದ್ಯೋಗಿಗಳ ಅಸೂಹೆಯನ್ನೂ ಒಳಗೊಂಡ ವಿಚಿತ್ರ ಸ್ಪರ್ಧೆಗಳ ನಡುವೆ ತನಗೇನೋ ಆಸ್ಕರ್ ಸಿಕ್ಕೆಬಿಡುತ್ತೆ ಎನ್ನುವಂತೆ ಹುಚ್ಚು ಸಾಹಸ ಕೈಗೊಳ್ಳುವ ಪತ್ರಕರ್ತ ಒಂದು ದಿನ ಇನ್ನಿಲ್ಲವೆನಿಸಿದಾಗ, ಆತನಿಗೆ ಸಿಗುವ ಗಿಫ್ಟ್ ಶ್ರದ್ಧಾಂಜಲಿ ಫೋಟೋ ಪ್ರೇಮ್ ಜೊತೆಗೆ, ಗ್ರಾಫಿಕ್ಸ್ ಕ್ಯಾಂಡಲ್‌ಗಳ ಎರಡು ದೀಪದ ಬೆಳಕು ಮಾತ್ರ. ಇದು ಬಿಟ್ಟರೆ, ಎರಡು ನಿಮಿಷದ ಮೌನ. ಅದರಾಚೆಗೆ ಆತನ ಸ್ಥಾನಕ್ಕೆ ಸಾಲು ಸಾಲು ಅರ್ಜಿಗಳು ಸಲ್ಲಿಕೆಯಾಗಿ, ತಮ್ಮನ್ನೆ ತೆಗೆದುಕೊಳ್ಳಿ ಎಂಬ ಶಿಪಾರಸ್ಸಿನ ಕೆಲಸ ಆರಂಭವಾಗಿರುತ್ತದೆ. ಈ ಕಾಮನ್ ಸಂಗತಿಗಳ ನಡುವೆ ಪತ್ರಕರ್ತ ಶಶಿಧರ್ ಕೆವಿ ವಿಚಾರದಲ್ಲಿ ಪಬ್ಲಿಕ್ ಟಿವಿ ನಡೆದುಕೊಂಡ ರೀತಿ, ಮಾಧ್ಯಮ ಲೋಕದಲ್ಲೊಂದು ಸಣ್ಣ ಪಾಠವಾಗಿ ಕಾಣುತ್ತಿದೆ.
ಶಶಿಧರ್ ಪ್ರತಿ ಪತ್ರಕರ್ತನ ರೀತಿಯಲ್ಲಿ ಅತ್ಯತ್ತುಮ ಕೆಲಸಗಾರನಾಗಿದ್ದ. ಪತ್ರಕರ್ತನೊಳಗಷ್ಟೆ ನೋಡಬಹುದಾದ ವಿಶೇಷ ಗುಣ ಅವಗುಣಗಳು ಆತನಲ್ಲಿಯು ಇದ್ದವು. ಶಿವಮೊಗ್ಗದಲ್ಲಿ ಪಬ್ಲಿಕ್ ಟಿವಿಯ ಮೈಕ್ ಹಿಡಿದು ಸಾಗುತ್ತಿದ್ದ ಹಾದಿಯಲ್ಲಿ ಆತನಿಗೆ ಆರೋಗ್ಯ ಸಹಕಾರ ಕೊಡಲಿಲ್ಲ. ಒಂದು ದಿನ, ಇದಕ್ಕಿದ್ದಂತೆ ಕುಸಿದು ಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದಾಗ, ಅವನಿಗೂ ಆಘಾತ ಎದುರಾಗಿತ್ತು. ಎರಡು ಕಿಡ್ನಿ ವೈಫಲ್ಯಗಳಿಂದ ಬಳಲುತ್ತಿದ್ದಾನೆ ಎಂಬ ಸತ್ಯವನ್ನು ವೈದ್ಯರು ಹೇಳಿದಾಗ, ಶಶಿಧರ್‌ನ ಜೊತೆಗಾರ ಪತ್ರಕರ್ತರಿಗೂ ಏದೆ ದಸಕ್ ಅಂದಿತ್ತು. ನಾವೇನು ಮಾಡುತ್ತಿದ್ದೇವೆ. ನಮ್ಮ ಕೆಲಸ ಎಂತದ್ದು, ನಮ್ಮ ಜೀವನ ಸರಿದಾರಿಯಲ್ಲಿದೆಯೇ? ನಮ್ಮ ಭವಿಷ್ಯದ ಪ್ರಶ್ನೆಯೇನು? ಹೀಗೆ ಸಾವಿರ ಪ್ರಶ್ನೆಗಳು ಶಶಿಧರ್‌ನನ್ನ ಆಸ್ಪತ್ರೆಯಲ್ಲಿ ನೋಡಿ, ಏನಾಗಲ್ಲ ಆರಾಮಾಗ್ತಿಯಾ ಎಂದು ಹೇಳಿದವರ ಮನಸ್ಸಲ್ಲಿ ಕಾಡುತ್ತಿತ್ತು. ಮೇಲಾಗಿ ಶಶಿಯ ಭವಿಷ್ಯವೇನು ಎಂಬುದು ಸಹ ನಿರ್ಣಯವಾಗಿತ್ತು.
ಅವತ್ತು ಪತ್ರಕರ್ತರ ಮನಸ್ಸಿನಲ್ಲಿದ್ದ ನಿರೀಕ್ಷೆಗಳನ್ನು ಸುಳ್ಳು ಮಾಡಿದ್ದು ಪಬ್ಲಿಕ್ ಟಿವಿ. ಪತ್ರಕರ್ತನಿಗೆ ಆರೋಗ್ಯ ಕೈಕೊಟ್ಟರೆ ಮುಲಾಜೇ ತೋರದೆ ಕಿತ್ತುಹಾಕಿ ಆತನ ಜಾಗಕ್ಕೆ ಇನ್ನೊಬ್ಬಾತನ ನೇಮಕ ಮಾಡುವ ಜರ್ನಲಿಸಮ್ ವ್ಯವಸ್ಥೆಯ ನಡುವೆ ಆತ ಎಲ್ಲಿವರೆಗೂ ಇರುತ್ತಾನೋ ಅಲ್ಲಿವರೆಗೂ ಅವನು ತಮ್ಮ ಸಂಸ್ಥೆಯಲ್ಲಿ ಇರಲಿ ಎಂದು ಬಿಟ್ಟಿತ್ತು ಪಬ್ಲಿಕ್ ಟಿವಿ. ಪಬ್ಲಿಕ್ ಟಿವಿಯನ್ನ ಮುನ್ನೆಡೆಸುತ್ತಿರುವ ಹೆಚ್‌ಆರ್ ರಂಗನಾಥ್ ಇಂತಹದ್ದೊಂದು ತೀರ್ಮಾನವನ್ನು ತಮ್ಮ ಎಡಿಟೋರಿಯಲ್ ಸಿಬ್ಬಂದಿಯ ಸಲಹೆ ಜೊತೆಗೆ ತೆಗೆದುಕೊಂಡಿದ್ದರು. ಹೀಗೊಂದು ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬುದನ್ನು ಸಹ ಪತ್ರಕರ್ತ ಶಶಿಧರ್‌ಗೆ ಆ ಸಂಸ್ಥೆ ತಿಳಿಸಿರಲಿಲ್ಲ. ಬದಲಾಗಿ, ಶಶಿಧರ್‌ನಿಂದ ಹೆಚ್ಚು ಸುದ್ದಿಯನ್ನು ಎಕ್ಸ್‌ಪೆಕ್ಟ್ ಮಾಡಲಿಲ್ಲ. ಆತ ವರದಿ ಮಾಡಿದ ಸುದ್ದಿಯನ್ನಷ್ಟೆ ಸ್ವೀಕರಿಸಿ ಬಿತ್ತರಿಸಿತು. ಜಿಲ್ಲಾವರದಿಗಾರನ ಮೇಲೆ ಸಂಸ್ಥೆಯೊಂದರ ಇನ್‌ಪುಟ್ ಹಾಕುವ ಒತ್ತಡವನ್ನು ಪಬ್ಲಿಕ್ ಟಿವಿ ಶಶಿಧರ್ ಮೇಲೆ ಹಾಕಿರಲಿಲ್ಲ. ಈ ಕಾರಣ, ಶಶಿಧರ್‌ನ ಆರೋಗ್ಯ ಒಂದಿಷ್ಟು ಸುದಾರಿಸಿತ್ತು. ಅಲ್ಲದೆನೇ ಪಬ್ಲಿಕ್ ಟಿವಿಯ ತೋರಿದ ಮಾನವೀಯತೆಯಿಂದಲೇ, ಶಶಿಧರ್ ತನ್ನ ಪ್ರತಿ ತಿಂಗಳ ವೈದ್ಯಕೀಯ ವೆಚ್ಚ ಭರಿಸಿಕೊಂಡರು.
ಇದರ ನಡುವೆ ಪಬ್ಲಿಕ್ ಟಿವಿಯನ್ನು ಹಲವು ರೆಸ್ಯೂಮ್‌ಗಳು ಎಡತಾಕಿದರೂ ಸಹ ಎಲ್ಲದಕ್ಕೂ ನೋ ಎಂದಿದ್ದು ಪಬ್ಲಿಕ್ ಟಿವಿ ಹೆಚ್ ಆರ್ ಟೀಂ. ಪ್ರಧಾನ ಇವೆಂಟ್‌ಗಳಿದ್ದಾಗ ನೆರೆಹೊರೆಯ ಜಿಲ್ಲೆಯ ವರದಿಗಾರರನ್ನು ಶಿವಮೊಗ್ಗಕ್ಕೆ ಕಳುಹಿಸಿ ಹೈಪ್ ಸುದ್ದಿ ಸನ್ನಿವೇಶಗಳನ್ನು ಸಹ ಸುಮಾರು ಒಂದುವರೆ ವರುಷ ನಿಬಾಯಿಸಿದ ಪಬ್ಲಿಕ್ ಟಿವಿ ಟೀಂ, ಶಶಿಧರ್‌ರಿಗೆ ಅಕ್ಷರಶಃ ಊರುಗೋಲಾಗಿ ನಿಂತಿತ್ತು. ಪ್ರತಿಹಂತದಲ್ಲಿಯು ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದ ಪಬ್ಲಿಕ್ ಟಿವಿ ಆತನ ರಜೆಗಳನ್ನು ಪ್ರಶ್ನಿಸಲಿಲ್ಲ , ಕೆಲಸದ ಪ್ರೊಗ್ರೆಸಿವ್ ರಿಪೋರ್ಟ್ ಕೇಳಲಿಲ್ಲ, ಹೈಪ್ ಎಷ್ಟು, ಎಕ್ಸ್‌ಕ್ಲೂಸಿವ್ ಎಷ್ಟು, ಇಂಪ್ಯಾಕ್ಟ್ ಎಷ್ಟು, ನಾಳೆ ಏನು ಕೊಡ್ತೀರಿ, ಆ ಸುದ್ದಿ ಏಕೆ ನಮಗೆ ಬಂದಿಲ್ಲ, ಆ ವಿಡಿಯೋ ನಮ್ಮಲ್ಲೇಕಿಲ್ಲ, ಎಂತೆಲ್ಲಾ ಕೇಳಲಿಲ್ಲ. ಇದರಿಂದಾಗಿ ಆರೋಗ್ಯದ ಪ್ರತಿಕೂಲ ಪರಿಸ್ಥಿತಿಯ ನಡುವೆಯು ಶಶಿಧರ್ ತಮ್ಮ ವಿಡಿಯೋ ಜರ್ನಲಿಸ್ಟ್ ಸತೀಶ್ ಹಾಗೂ ಇತರೇ ಚಾನಲ್‌ಗಳ ಪತ್ರಕರ್ತರ ಸಹಕಾರದೊಂದಿಗೆ ಕುಗ್ಗದೆ ಕೆಲಸ ಮಾಡಿದರು.
ಹೀಗೆ ನಡೆಯುತ್ತಿದೆ ಎನ್ನುತ್ತಿದ್ದಾಗಲೇ ಮತ್ತೆ ಕುಸಿದುಬಿದ್ದು ಆಸ್ಪತ್ರೆಗೆ ದಾಖಲಾದ ಶಶಿಧರ್ ಇಹಲೋಕ ತ್ಯಜಿಸಿದರು. ದುಃಖದ ಈ ಸನ್ನಿವೇಶದಲ್ಲಿ ಸಹ ಅವರನ್ನು ಗೌರವದಿಂದಲೇ ನಡೆಸಿಕೊಂಡಿತು ಪಬ್ಲಿಕ್ ಟಿವಿ. ತಮ್ಮ ವರದಿಗಾರನ ಮರಣದ ವರದಿಯನ್ನು ಇಡೀ ಪಬ್ಲಿಕ್ ಟಿವಿ ತಂಡ ದುಗುಡ ಸಂತಾಪದೊಂದಿಗೆ ವರದಿ ಮಾಡಿತು. ಶ್ರದ್ಧಾಂಜಲಿಯ ಫೋಟೋ ಹಂಚಿಕೊಳ್ಳುವ ಸೀಮಿತತೆಗೆ ಸೀಮಿತವಾಗದೆ, ಪಬ್ಲಿಕ್‌ಟಿವಿಯ ಎಡಿಟೋರಿಯಲ್ ಟೀಂ ಶಶಿಧರ್‌ರವರ ಅಂತ್ಯಕ್ರಿಯೆಯಲ್ಲಿಯು ಪಾಲ್ಗೊಂಡು ಕುಟುಂಬಸ್ಥರಿಗೆ ಸಾಂತ್ವನ ಹೇಳಿತು. ಜೊತೆಯಲ್ಲಿ ನಾವಿದ್ದೇವೆ ಎಂಬ ಭರವಸೆಯನ್ನು ಅವರ ಕುಟುಂಬಸ್ಥರಿಗೆ ನೀಡಿತು. ಅನಿವಾರ್ಯತೆಯಿಂದಾಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗದಿದ್ದರೂ ಸಹ ಪಬ್ಲಿಕ್ ಟಿವಿ ರಂಗಣ್ಣ ಸಹ ಶಶಿಧರ್‌ರವರ ಸಾವಿಗೆ ಸಂತಾಪ ಸೂಚಿಸಿದರು. ಮಾತಿಗೋ ಅಥವಾ ತೋರುವಿಕೆಗೋ ಟಿವಿ ಜಗತ್ತಿನ ಮೀಡಿಯಾ ಸಂಸ್ಥೆಗಳನ್ನು ಎಳ್ಳಷ್ಟು ಹೊಗಳಲಾಗದು. ಏಕೆಂದರೆ ಅದರೊಳಗಿನ ತುಡಿತ, ತುಳಿತಗಳೆರಡು ಸಹ ಪತ್ರಕರ್ತ ಜಗತ್ತಿಗೆ ತಿಳಿದಿರುವ ತಿಳಿ ಸತ್ಯ. ಆದರೆ ಪಬ್ಲಿಕ್ ಟಿವಿ ಪತ್ರಕರ್ತನೊಬ್ಬನ ವಿಚಾರದಲ್ಲಿ ನಡೆದುಕೊಂಡ ರೀತಿಯನ್ನ ಬರೆಯದ್ದಿದ್ದರೇ ಪತ್ರಕರ್ತನಾಗಿ ತಪ್ಪಾಗುತ್ತದೆ. ಈ ಯೋಚನೆಯ ಪ್ರತಿರೂಪವಷ್ಟೆ ಈ ಮೇಲಿನ ವರದಿ..
SUMMARY | journalist Shashidhar and the Public TV team
KEY WORDS |journalist Shashidhar, Public TV