SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 27, 2024
ಶಿವಮೊಗ್ಗ | ಈ ಜಗತ್ತಿಗೆ ಈಗ ಕೋವಿ ಮತ್ತು ಕತ್ತಿಗೆ ಕವಿ ಮತ್ತು ಕಾವ್ಯದ ಜರೂರತ್ತಿದೆ. ಶತಶತಮಾನಗಳಿಂದ ಆಗಿರುವ ಗಾಯಗಳಿಗೆ ಕವಿ ನೀಡುವ ಕಾವ್ಯದ ಮುಲಾಮೇ ಅಂತಿಮ ಔಷಧ. ಕವಿತೆಯಿಂದ ಈ ಜಗತ್ತನ್ನು ಗೆಲ್ಲಲು ಸಾಧ್ಯ. ಕೋವಿ ಮತ್ತು ಕತ್ತಿಗಳಿಗೆ ನಮ್ಮ ನಮ್ಮ ಕಾವ್ಯದಿಂದ ತುಕ್ಕು ಹಿಡಿಸಲು ಪ್ರಯತ್ನಿಸೋಣ ಎಂದು ಪತ್ರಕರ್ತ, ಸಾಹಿತಿ ಶಿ.ಜು.ಪಾಶ ಹೇಳಿದರು.
ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಸಿರಿಗನ್ನಡ ವೇದಿಕೆ, ಸಿರಿಗನ್ನಡ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ `ಮಥುರಾ ಪ್ಯಾರಡೈಸ್ ರಜತ ಮಹೋತ್ಸವ’ದ ಸವಿನೆನಪಿನ ಡಾ.ಜೆ.ವಿ.ನಾಗರತ್ನಮ್ಮರವರ ಸಾಹಿತ್ಯ ಸಂಗಮ ಕೃತಿ ಬಿಡುಗಡೆ ಹಾಗೂ ಕವಿಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಜಗತ್ತಿನಲ್ಲಿ ಎಲ್ಲದನ್ನೂ ದಕ್ಕಿಸಿಕೊಳ್ಳಬಹುದು. ಸಾಹಿತ್ಯವನ್ನು ದಕ್ಕಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಲೇಖಕ ತನ್ನೊಳಗೆ ಭಾವತಲ್ಲಣಗಳಿಗೆ ಒಳಗಾಗಿ ಕವಿತೆ, ಕಥೆ, ಕಾದಂಬರಿ ಬರೆದುಬಿಡಬಹುದು. ಅದು ಓದುವವರಿಗೂ ಹಾಗೂ ಬರೆದ ಲೇಖಕರಿಗೂ ಸಂಪೂರ್ಣವಾಗಿ ದಕ್ಕುವುದಿಲ್ಲ ಎಂಬುದೇ ಅಂತಿಮ ಸತ್ಯ. ಹಾಗಾಗಿ, ಓದುವವರು ಓದುತ್ತಲೇ ಇರುತ್ತಾರೆ. ಬರೆಯುವವರು ಮತ್ತೆ ಮತ್ತೆ ಬರೆಯುತ್ತಲೇ ಇರುತ್ತಾರೆ. ಸಾಹಿತ್ಯವನ್ನು ದಕ್ಕಿಸಿಕೊಳ್ಳುವ ನಿರಂತರ ಪ್ರಯತ್ನ ನಡೆಯುತ್ತಲೇ ಇರುತ್ತದೆ ಎಂದರು.
ಈ ಕಠೋರ ಜಗತ್ತಲ್ಲಿ `ಕವಿ ಹೃದಯಿ’ ಎನಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ. ಎಲ್ಲರಿಗೂ ಈ ವಿಶೇಷವಾದ ಕವಿಹೃದಯ ಇರಲು ಸಾದ್ಯವಿಲ್ಲ. ಈ ಜಗತ್ತಿನ ತುಂಬಾ ಇಂಥ ಹೃದಯಗಳೇ ಇದ್ದುಬಿಟ್ಟಿದ್ದರೆ ಎಲ್ಲೂ ಯುದ್ಧಗಳಾಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಕಾಲೇಜಿನ ಅಧ್ಯಾಪಕರಾದ ಡಾ.ಲವ ಜಿ.ಆರ್. ವಹಿಸಿದ್ದರು. ವೇದಿಕೆಯಲ್ಲಿ ಫ್ರೊ.ಸತ್ಯನಾರಾಯಣ್, ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾದ ಎ.ಹೆಚ್.ನಿರಂಜನ್ ಕುಮಾರ್, ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ನಂದಾ ಪ್ರೇಮಕುಮಾರ್ ಇದ್ದರು. ಟಿಎಂಎಇಎಸ್ ಮಹಾವಿದ್ಯಾಲಯದ ಆಯುರ್ವೇದ ವೈದ್ಯರಾದ ಡಾ.ಮೈಥಿಲಿ ಪೂರ್ಣಾನಂದ್ ಆಯುರ್ವೇದ ಮತ್ತು ಆರೋಗ್ಯದ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ಜೆ.ವಿನಾಗರತ್ನಮ್ಮರವರ ಸಾಹಿತ್ಯ ಸಂಗಮ ಕೃತಿಯನ್ನು ಬಿಡುಗಡೆ ಮಾಡಲಾಯಿತು. 25ಕ್ಕೂ ಹೆಚ್ಚಿನ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.
SUMMARY | Let us try to rust the guns and swords with our poetry,” said journalist and writer Shiju Pasha
KEYWORDS | journalist, Shiju Pasha, poetry,