SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 3, 2025
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಜಾಗ ಮಹಾನಗರ ಪಾಲಿಕೆಯ ಸ್ವತ್ತಾಗಿದ್ದು ಅದನ್ನು ಉಳಿಸುವ ದೃಷ್ಟಿಯಿಂದ ಏಪ್ರಿಲ್ 05 ರಂದು ಬೆಳಿಗ್ಗೆ 10:30 ಕ್ಕೆ ರಾಷ್ಟ್ರಭಕ್ತ ಬಳಗದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ರಾಷ್ಟ್ರ ಭಕ್ತ ಬಳಗದ ಸಂಚಾಲಕರಾದ ಕೆ ಎಸ್ ಈಶ್ವರಪ್ಪ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದಲ್ಲಿ ಡಿಸಿ ಕಚೇರಿ ಎದುರಿರುವ ಜಾಗವನ್ನು ಈದ್ಗಾ ಮೈದಾನ ಎನ್ನುತ್ತಿದ್ದರು. ಆದರೆ ಅದು ಈಗ ಆಟದ ಮೈದಾನವಾಗಿದೆ. ಈಗ ಮಹಾನಗರ ಪಾಲಿಕೆ ಜಾಗವನ್ನು ಕಬಳಿಸಲು ಮುಸಲ್ಮಾನರು ಯತ್ನಿಸುತ್ತಿದ್ದಾರೆ.ಮಹಾನಗರ ಪಾಲಿಕೆಯ ಸ್ವತ್ತಾಗಿರುವ ಈ ಜಾಗವನ್ನು ಬೇರೆ ಯಾವುದಕ್ಕೂ ಬಳಸಲು ಬರುವುದಿಲ್ಲ. ಇದನ್ನು ಹೇಗೆ ಅವರು ನಮಾಜ್ ಮಾಡಲು ಕೇಳುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.ಈ ಬಗ್ಗೆ ಜಿಲ್ಲಾಧಿಕಾರಿಗಳು ತುರ್ತಾಗಿ ಪರಿಶೀಲಿಸಿ ಅದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಈದ್ಗಾ ಮೈದಾನಕ್ಕೆ ಖಾತೆ ಇದೆ ಎಂದು ಮುಸ್ಲಿಮರು ಹೇಳುತ್ತಿದ್ದಾರೆ. ಆದರೆ ಆ ಖಾತೆಗೆ ಯಾವುದೇ ಮುಖ್ಯಸ್ಥರ ಸಹಿ ಇಲ್ಲ . ಗೆಜೆಟ್ ನೋಟಿಫಿಕೇಶನ್‌ನಲ್ಲಿ ಈದ್ಗಾ ಸುನ್ನಿ ಶಿವಮೊಗ್ಗ ನಗರ ಎಂದು ಮಾತ್ರ ನಮೂದಿಸಲಾಗಿದೆ. ಆದರೆ ಸ್ಥಳದ ವಿಳಾಸವನ್ನು ಅದರಲ್ಲಿ ಸರಿಯಾಗಿ ನಮೂದಿಸಲಿಲ್ಲ. ಅವರಿಗೆ ಈ ರೀತಿಯ ಖಾತೆ ಮಾಡಿ ಕೊಟ್ಟಿರುವುದು ಕಾನೂನು ಬಾಹಿರವಾಗಿದೆ. ಖಾತೆ ಬದಲು ಮಾಡಿದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಈ ಎಲ್ಲಾ ಅಂಶಗಳನ್ನು ಜಿಲ್ಲಾಧಿಕಾರಿಗಳು ಗಮನಿಸುತ್ತಾರೆ ಎಂದುಕೊಳ್ಳುತ್ತೇನೆ ಎಂದರು.
ಆ ಮೈದಾನದಲ್ಲಿ ಬೇಲಿ ನಿರ್ಮಿಸುವಾಗ ಮುಸ್ಲಿಮರು ರೈಲ್ವೇ ಹಳಿಯ ಕಬ್ಬಿಣವನ್ನು ಬಳಸಿಕೊಂಡಿದ್ದಾರೆ. ಅದು ಕಾನೂನು ಬಾಹಿರ ಕೃತ್ಯವಾಗಿದೆ. ಆ ರೀತಿಯ ಕೃತ್ಯವನ್ನು ಎಸಗಿದವರನ್ನು ಪೊಲೀಸ್ ಅಧಿಕಾರಿಗಳು ಹುಡುಕಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
SUMMARY | “We will hold a protest in front of the Deputy Commissioner’s office on April 5 at 10.30 am,” said K S Eshwarappa, convener of Rashtrabhakta Balaga.
KEYWORDS | protest, Deputy Commissioner’s office, Eshwarappa, Rashtrabhakta Balaga,