Ustad Rafique Khan ಅಲಂಕಾರ್ ಸಂಗೀತ ಸಭಾ ಶಿವಮೊಗ್ಗದ ಇವರ ವತಿಯಿಂದ ಆಗಷ್ಟ್ 17 ರಂದು ಸುವರ್ಣ ಸಂಸ್ಕೃತಿ ಭವನ ಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ಸಂಗೀತೋತ್ಸವ ಎಂಬ ಕಾರ್ಯಕ್ರಮಕ್ಕೆ ಮಂಗಳೂರಿನ ಅಂತರಾಷ್ಟ್ರೀಯ ಶ್ರೇಷ್ಟ ಸಿತಾರ್ ವಾದಕರಾಗಿರುವ ಉಸ್ತಾದ್ ರಫೀಕ್ ಖಾನ್ ಆಗಮಿಸಲಿದ್ದಾರೆ ಎಂದು ನಿಶಾದ್ ಹರ್ಲಾಪುರ್ ಹೇಳಿದರು.
ಇಂದು ನಗರದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಅಲಂಕಾರ್ ಸಂಗೀತ ಸಭಾ ಸಂಗೀತ ಶಾಲೆಯ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಗಾನಯೋಗಿ ಪಂಚಾಕ್ಷರಿ ಗವಾಯಿಗಳ 81ನೇ ಮತ್ತು ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ 15ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಈ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಭಾಗವಾಗಿ, ಉಸ್ತಾದ್ ರಫೀಕ್ ಖಾನ್ ಅವರಿಗೆ 2025ನೇ ಸಾಲಿನ ‘ಶ್ರೀ ಗುರು ಪುಟ್ಟರಾಜ ಕೃಪಾ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿನ ಶ್ರೀ ಬಸವ ತತ್ವ ಪೀಠದ ಡಾ. ಬಸವ ಮರುಳ ಸಿದ್ದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಕಾಂತರಾಜ್ ಟಿ.ಎಂ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶ್ರೀ ಗುರುಕೃಪ ಗಾನ ಮಂದಿರದ ಸಂಚಾಲಕ ಮತ್ತು ಖ್ಯಾತ ಹಿಂದೂಸ್ಥಾನಿ ಗಾಯಕರಾದ ಉಸ್ತಾದ್ ಹುಮಾಯುನ್ ಹರ್ಲಾಪುರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾರ್ಥಿಗಳು ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

