Shivamogga : ಶಿವಮೊಗ್ಗ: ದೇಶದಲ್ಲಿ ಮತ್ತೊಮ್ಮೆ ಕರಾಳ ತುರ್ತು ಪರಿಸ್ಥಿತಿಯ ಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ಶಿವಮೊಗ್ಗದ ಶ್ರೀಗಂಧ ಸಂಸ್ಥೆ ಮತ್ತು ಮಂಥನಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜುಲೈ 25 ರಂದು ಶುಭ ಮಂಗಳ ಸಮುದಾಯ ಭವನದಲ್ಲಿ ‘ಕರಾಳ ಅಧ್ಯಾಯ 50 ವರ್ಷ’ ಎಂಬ ವಿಶೇಷ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ 50 ವರ್ಷ ಕಳೆದಿವೆ. ಆದರೆ, ಈಗಿನ ಯುವಕರಿಗೆ ಆ ಕರಾಳ ಅವಧಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ‘ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದವರ ಮೇಲೂ ಎಫ್‌ಐಆರ್ ದಾಖಲಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಎಷ್ಟು ಜನ ಜೈಲಿಗೆ ಹೋಗಿ ಬಂದರು, ಇಡೀ ದೇಶವೇ ಜೈಲಾಗಿ ಮಾರ್ಪಟ್ಟಿತ್ತು ಎಂದು ಈಶ್ವರಪ್ಪ ಸ್ಮರಿಸಿದರು.
ಆ ಸಂದರ್ಭದಲ್ಲಿ ಅನೇಕ ಹೋರಾಟಗಾರರು ತುರ್ತು ಪರಿಸ್ಥಿತಿಯಿಂದ ಸಂಪೂರ್ಣ ಸ್ವಾತಂತ್ರ್ಯ ಬೇಕೆಂಬ ಕಾರಣದಿಂದ ತಮ್ಮ ಬಡತನವನ್ನೂ ಲೆಕ್ಕಿಸದೆ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ಜಯಪ್ರಕಾಶ ನಾರಾಯಣ್ ನೇತೃತ್ವದಲ್ಲಿ ಹೋರಾಟ ನಡೆದಾಗ, ಎಲ್.ಕೆ. ಅಡ್ವಾಣಿ ಸೇರಿದಂತೆ ಅನೇಕರನ್ನು ಬಂದ ದಿನವೇ ಬಂಧಿಸಲಾಯಿತು. ಈ ಕರಾಳ ಪರಿಸ್ಥಿತಿ ಮತ್ತೊಮ್ಮೆ ಬರಬಾರದು ಎಂಬ ಕಾರಣದಿಂದ ಹಾಗೆಯೇ ಯುವಕರಿಗೆ ಇದರ ಬಗ್ಗೆ ಅರಿವು ಮೂಡಿಸುವ ದೃಷ್ಠಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದರು.
Shivamogga : ಹೋರಾಟಗಾರರಿಗೆ ಮತ್ತು ನಿವೃತ್ತ ಯೋಧರಿಗೆ ಸನ್ಮಾನ
ನಂತರ ಶ್ರೀಗಂಧ ಸಂಸ್ಥೆಯ ಕೋಶಾಧ್ಯಕ್ಷರಾದ ಕೆ.ಇ. ಕಾಂತೇಶ್ ಮಾತನಾಡಿ, ಈ ಕರಾಳ ಸಂದರ್ಭದಲ್ಲಿ ಅನೇಕ ಹಿಂದುತ್ವವಾದಿಗಳು ಸೆರೆಮನೆವಾಸ ಅನುಭವಿಸಿದ್ದರು. ಅಂತಹ 35 ಜನರಿಗೆ ಅಂದಿನ ದಿನ ಸನ್ಮಾನ ಮಾಡಲಾಗುವುದು ಎಂದರು. ಹಾಗೆಯೇ, ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಇರುವುದರಿಂದ, 26 ನಿವೃತ್ತ ಸೈನಿಕರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಜುಲೈ 19 ರಂದು ಕಾಲೇಜು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಹಮ್ಮಿಕೊಂಡಿದ್ದು, ಅದರಲ್ಲಿ 18 ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಅವರಿಗೆ ಬಹುಮಾನ ವಿತರಣೆ ಹಮ್ಮಿಕೊಂಡಿದ್ದೇವೆ ಎಂದರು.
ಈ ಕಾರ್ಯಕ್ರಮವನ್ನು ತುರ್ತು ಪರಿಸ್ಥಿತಿಯ ಹೋರಾಟಗಾರರಾದ ಶ್ರೀ ಎ.ಎಸ್. ಪದ್ಮನಾಭ ಭಟ್ಟ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪ ವಹಿಸಲಿದ್ದು, ಖ್ಯಾತ ಸಾಹಿತಿಗಳಾದ ಜೆ.ಬಿ. ಹರೀಶ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
