Shivamogga Chain Snatching ಶಿವಮೊಗ್ಗ: ಕಳ್ಳರು ಹೊಸ ಹೊಸ ರೀತಿಯಲ್ಲಿ ಕಳ್ಳತನಕ್ಕೆ ಯೋಜನೆ ರೂಪಿಸುತ್ತಿದ್ದು, ಅಪರಿಚಿತರ ಮುಂದೆ ಮಾನವೀಯತೆ ತೋರಿಸಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಶಿವಮೊಗ್ಗದ ಹೊಸಮನೆ ನಿವಾಸಿ ಮಹಿಳೆಯೊಬ್ಬರ ಬಳಿ ನೀರು ಕೇಳಿದ ಅಪರಿಚಿತ ವ್ಯಕ್ತಿಯು, ಆಕೆಯ ಕೊರಳಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಶಿವಮೊಗ್ಗದ ಹೊಸಮನೆ ನಿವಾಸಿಯಾದ ಮಹಿಳೆಯೊಬ್ಬರು ಎಂದಿನಂತೆ ತಮ್ಮ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದರು. ಆ ಸಮಯದಲ್ಲಿ ಅವರ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಬಾಡಿಗೆಗೆ ಮನೆ ಇದೆಯೇ ಎಂದು ಕೇಳಿದ್ದಾನೆ. ಅದಕ್ಕೆ ಮಹಿಳೆ ಇಲ್ಲ ಎಂದು ಉತ್ತರಿಸಿದ್ದಾರೆ.
ತಕ್ಷಣ ಆತ ನನಗೆ ಬಹಳ ಸುಸ್ತಾಗುತ್ತಿದೆ ಕುಡಿಯಲು ಒಂದು ಲೋಟ ನೀರು ಕೊಡುವಂತೆ ಕೇಳಿದ್ದಾನೆ. ಮಹಿಳೆ ಮಾನವೀಯತೆ ದೃಷ್ಟಿಯಿಂದ ಸರಿ ಎಂದು ಒಪ್ಪಿ ನೀರನ್ನು ತಂದು ಕೊಟ್ಟಿದ್ದಾರೆ.ಆದರೆ, ಮೊದಲೇ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರದ ಮೇಲೆ ಕಣ್ಣಿಟ್ಟಿದ್ದ ಆ ಕಳ್ಳ, ಮಹಿಳೆ ನೀರು ಕೊಡುತ್ತಿದ್ದಂತೆಯೇ ಆಕೆಯ ಕೊರಳಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರವನ್ನು ಏಕಾಏಕಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.ಈ ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ತಕ್ಷಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

