SHIVAMOGGA | Jan 25, 2024 | shimoga traffic police fine check ಬೆಂಗಳೂರು ಟ್ರಾಫಿಕ್ ಪೊಲೀಸ್ ಸ್ಟೈಲ್ ನಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸಹ ಇತ್ತೀಚೆಗೆ ಮೀಟರ್ ಲೆಕ್ಕದಲ್ಲಿ ಫೈನ್ ಚೀಟಿ ಹರಿಯುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಪೀಕ್ ಟೈಂನಲ್ಲಿ ಆಗುವ ಟ್ರಾಫಿಕ್ ಕ್ಲಿಯರ್ ಮಾಡಲು ಯಾರೊಬ್ಬರು ಇರುವುದಿಲ್ಲ ಎನ್ನುವ ಆರೋಪದ ನಡುವೆಯು ಸಂಚಾರ ನಿಯಮ ಉಲ್ಲಂಘನೆಯ ವಿಚಾರದಲ್ಲಿ ಕಠಿಣವಾಗಿ ದಂಡ ವಿಧಿಸುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ದ್ವಿಚಕ್ರವಾಹನವೊಂದಕ್ಕೆ ಒಂದು ಮಾರು ಉದ್ದದ ದಂಡದ ರಸೀದಿ ಹರಿದಿದ್ದ ಶಿವಮೊಗ್ಗ ಸಂಚಾರಿ ಪೊಲೀಸರು ಇದೀಗ ಬಸ್ ಹಾಗೂ ಬೈಕ್ವೊಂದಕ್ಕೆ ಟ್ರಾಫಿಕ್ ನಿಯಮ ಉಲ್ಲಂಘನೆಯ ಆರೋಪದಡಿಯಲ್ಲಿ ಬರೋಬ್ಬರಿ 38500 ರೂಪಾಯಿ ಫೈನ್ ಹಾಕಿದ್ದಾರೆ.
ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಸಿಪಿಐ ಸಂತೋಷ್ ಕುಮಾರ್, ಪಿಎಸ್ಐ ತಿರುಮಲೇಶ್ ಹಾಗೂ ಕೃಷ್ಣಪ್ಪ ಎ. ಎಸ್.ಐ, ಪ್ರಕಾಶ್ ಎ.ಆರ್.ಎಸ್.ಐ, ನಾಸಿರ್ ಹೆಚ್.ಸಿ, ಪ್ರವೀಣ್ ಪ್ರವೀಣ್ ಪಾಟೀಲ್ ಹೆಚ್.ಸಿ, ಅವಿನಾಶ್ ಗೃಹರಕ್ಷಕ, ರವರನ್ನ ಒಳಗೊಂಡ ತಂಡ ಈ ಮೊತ್ತದ ದಂಡ ಸಂಗ್ರಹಿಸಿದೆ.
ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿ ದಂಡವನ್ನು ಪಾವತಿ ಮಾಡದೇ ಇರುವಂತಹ KA35A8219 ಬಸ್ಸನ್ನು ನಿಲ್ಲಿಸಿ ಒಟ್ಟು 17 ಸಂಚಾರ ನಿಯಮ ಉಲ್ಲಂಘನೆಗೆ ಪ್ರಕರಣಗಳಲ್ಲಿ 18,000 ರೂ.ಗಳ ದಂಡ ವಿಧಿಸಿದೆ.

ಇನ್ನೊಂದೆಡೆ ಮಂಜುನಾಥ್ ಎ.ಎಸ್.ಐ. ರವರು KA.14.EC.6407 ಬೈಕ್ ಮೇಲೆ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿದ ಒಟ್ಟು 15 ಸಂಚಾರ ನಿಯಮ ಉಲ್ಲಂಘನೆಗೆ ಪ್ರಕರಣಗಳಲ್ಲಿ 20,500 ರೂ.ಗಳ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ..
ಒಟ್ಟು 2 ವಾಹನದ ಮೇಲೆ 38500 ರೂ. ಗಳ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈ ಹಿಂದೆ 17 ಸಾವಿರ ಫೈನ್ ಹಾಕಿದ್ದ ದಾಖಲೆಯನ್ನ ಮುರಿದಿದ್ದಾರೆ.
