Rahul gandhi ಬೆಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆಗೂ ಮೊದಲು ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಂವಿಧಾನದ ಪುಸ್ತಕವನ್ನು ಹಿಡಿದು ಮಾತನಾಡಿದ ರಾಹುಲ್, ಇದು ಗಾಂಧೀಜಿ, ಅಂಬೇಡ್ಕರ್, ನೆಹರೂ, ಪಟೇಲ್, ಬಸವಣ್ಣ ಮತ್ತು ಫುಲೆಯಂತಹ ಮಹನೀಯರ ಧ್ವನಿಯನ್ನು ಒಳಗೊಂಡಿದೆ. “ಒಬ್ಬ ವ್ಯಕ್ತಿಗೆ ಒಂದು ಮತ” ಎಂಬ ಹಕ್ಕನ್ನು ಈ ಸಂವಿಧಾನ ನೀಡಿದೆ. ಆದರೆ, ಬಿಜೆಪಿಯವರು ಈ ಸಂವಿಧಾನದ ಮೇಲೆ ದಾಳಿ ಮಾಡಿ ಅದನ್ನು ಮುಗಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆಯ ನಂತರ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಅಚ್ಚರಿ ತಂದಿದೆ. ಏಕೆಂದರೆ, ಈ ಚುನಾವಣೆಯಲ್ಲಿ ಒಂದು ಕೋಟಿ ಹೊಸ ಮತದಾರರು ಮತ ಹಾಕಿದ್ದು, ಲೋಕಸಭೆ ಚುನಾವಣೆಯಲ್ಲಿ ಇವರೆಲ್ಲ ಮತ ಹಾಕಿರಲಿಲ್ಲ. ಇದರಿಂದ ಏನೋ ಷಡ್ಯಂತ್ರ ನಡೆದಿದೆ ಎಂದು ಆವಾಗಲೇ ಅನಿಸಿತು ಎಂದರು.
Rahul gandhi : ಮಹದೇವಪುರದಲ್ಲಿ ಮತಗಳ್ಳತನದ ಗಂಭೀರ ಆರೋಪ:
ರಾಹುಲ್ ಗಾಂಧಿ ಕರ್ನಾಟಕದ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಾ, ನಮ್ಮ ಆಂತರಿಕ ಸಮೀಕ್ಷೆಯ ಪ್ರಕಾರ ನಾವು 16 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ನಾವು ಗೆದ್ದಿದ್ದು ಕೇವಲ 9 ಕ್ಷೇತ್ರಗಳಲ್ಲಿ. ಆದ್ದರಿಂದ ನಾವು ಒಂದು ಕ್ಷೇತ್ರದ ಬಗ್ಗೆ ಆಳವಾಗಿ ಪರಿಶೀಲಿಸಿದಾಗ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಮಹದೇವಪುರದಲ್ಲಿ 6.5 ಲಕ್ಷ ಮತಗಳ ಪೈಕಿ 1,00,250 ಮತಗಳು ಕಳುವಾಗಿವೆ. ಅಂದರೆ, ಪ್ರತಿ ಆರು ಮತಗಳಲ್ಲಿ ಒಂದು ಮತವನ್ನು ಕಳವು ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಒಬ್ಬ ವ್ಯಕ್ತಿಯೇ ನಾಲ್ಕೈದು ಮತಗಟ್ಟೆಗಳಲ್ಲಿ ಮತ ಹಾಕಿದ್ದಾರೆ, ನಕಲಿ ವಿಳಾಸ, ನಕಲಿ ಫೋಟೋ, ಹಾಗೂ ಒಂದೇ ವಿಳಾಸದಲ್ಲಿ 40-50 ಜನ ಇದ್ದು, ಇವರೆಲ್ಲ ಬಿಜೆಪಿ ಮುಖಂಡರ ಮನೆಗಳಲ್ಲಿ ವಾಸವಾಗಿದ್ದಾರೆ. ಇವೆಲ್ಲವುಗಳನ್ನು ಸೇರಿಸಿದರೆ 1,00,250 ಮತಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದರು. ಚುನಾವಣಾ ಆಯೋಗವು ತಮ್ಮಿಂದ ಪ್ರಮಾಣಪತ್ರ ಕೇಳುತ್ತಿದ್ದು, ತಾವು ಸಂಸತ್ತಿನಲ್ಲಿ ಸಂವಿಧಾನದ ಮೇಲೆ ಪ್ರಮಾಣ ಮಾಡಿರುವುದರಿಂದ ಹೇಳುತ್ತಿರುವುದು ಸತ್ಯ ಎಂದರು. ಅಲ್ಲದೆ, ಚುನಾವಣಾ ಆಯೋಗವು ಎಲ್ಲ ಮತದಾರರ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ಮತ್ತು ಮತ ಚಲಾವಣೆಯ ವಿಡಿಯೋ ದಾಖಲೆಗಳನ್ನು ನೀಡಿದರೆ, ಅಕ್ರಮವನ್ನು ಸಾಬೀತುಪಡಿಸುವುದಾಗಿ ಸವಾಲು ಹಾಕಿದರು.
Rahul gandhi : ಏಳು ಕ್ಷೇತ್ರಗಳಲ್ಲಿ ಮತ ಕದಿಯುವ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಈ ಪ್ರತಿಭಟನೆಯು ಕರ್ನಾಟಕದಿಂದ ಆರಂಭವಾಗಿದೆ. “ಒಬ್ಬ ವ್ಯಕ್ತಿಗೆ ಒಂದು ಮತ” ಎಂಬ ಸಂವಿಧಾನದ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮನುವಾದಿಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳವಾಗಿವೆ. ಕರ್ನಾಟಕದಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದು, ಈಗ ಮತಗಳ್ಳತನಕ್ಕೂ ಮುಂದಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಮತ ಕದಿಯುವ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಮತಗಳ್ಳತನದಿಂದ ಪ್ರಧಾನಿಯಾಗಿದ್ದು, ಅಧಿಕಾರದಲ್ಲಿ ಮುಂದುವರೆಯಲು ಅನರ್ಹರು. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
Rahul gandhi : ಮತದಾರನ್ನು ದುರುಪಯೋಗಪಡಿಸಿಕೊಂಡು ಮೋದಿ ದೇಶವನ್ನು ಆಳುತ್ತಿದ್ದಾರೆ : ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇದು “ಕಳ್ಳತನದ ಸರ್ಕಾರ”ವಾಗಿದ್ದು, ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ಹಕ್ಕಿಲ್ಲ. ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿ ಎಲ್ಲ ಕಡೆ ಮತದಾರರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮೋದಿ ದೇಶವನ್ನು ಆಳುತ್ತಿದ್ದಾರೆ. 2019ರ ಚುನಾವಣೆಯಲ್ಲಿ ತಾವು ಸೋತಿದ್ದರ ಹಿಂದೆಯೂ ಬೋಗಸ್ ವೋಟಿಂಗ್ ಕಾರಣವಾಗಿದೆ ಎಂದು ಖರ್ಗೆ ಹೇಳಿದರು. ಮುಂದಿನ ಸೋಮವಾರ, ಎಲ್ಲಾ ಸಂಸದರು ಕೇಂದ್ರ ಚುನಾವಣಾ ಆಯೋಗಕ್ಕೆ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು. ಚುನಾವಣಾ ಆಯೋಗ ಕೂಡ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದರು. ನಮ್ಮ ಮತದ ಹಕ್ಕನ್ನೇ ಕಸಿದುಕೊಂಡ ಮೇಲೆ ನಾವು ದೇಶದ ನಾಗರಿಕರೇ ಅಲ್ಲ ಎಂದು ಖರ್ಗೆ ಹೇಳಿದರು.
