ಶಿವಮೊಗ್ಗ : ಸಾಗರ ತಾಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದ ರೈತರೊಬ್ಬರು ಸಾಲದ ಹೊರೆಯನ್ನು ತಡೆದುಕೊಳ್ಳಲಾಗದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಾಮಪ್ಪ (56) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ.
ರೈತ ಗಾಮಪ್ಪ ಅವರು ಗ್ರಾಮದ ಗಾಮಪ್ಪ ತಮ್ಮ ಜಮೀನಿನಲ್ಲಿ ಅಡಿಕೆ, ಕಬ್ಬು, ಶುಂಠಿ, ಭತ್ತ, ಅಡಿಕೆ ಬೆಳೆಯನ್ನು ಬೆಳೆದಿದ್ದರು. ಆದರೆ ಈ ವರ್ಷ ಸುರಿದ ಭಾರೀ ಮಳೆಯಿಂದ ಅಡಿಕೆಗೆ ಕೊಳೆ ರೋಗ ಹಾಗೂ ಶುಂಠಿಗೆ ಎಲೆಚುಕ್ಕಿ ರೋಗ ಬಂದು ಬೆಳೆ ನಾಶವಾಗಿದೆ. ಮೊದಲೇ ಬ್ಯಾಂಕುಗಳು ಸೇರಿದಂತೆ ವಿವಿಧ ಮೂಲಗಳಿಂದ ಕೈಸಾಲವನ್ನು ಪಡೆದಿದ್ದ ಗಾಮಪ್ಪ, ಮಳೆಯಿಂದ ಬೆಳೆ ನಷ್ಟವಾದ ಕಾರಣ ಅಕ್ಟೋಬರ್ 09 ರಂದು ಸಂಜೆ ವಿಷ ಸೇವಿಸಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಈ ಘಟನೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
Farmer Suicide