Election commision ಶಿವಮೊಗ್ಗದಲ್ಲಿ ಚುನಾವಣಾ ಆಯೋಗದ ತಂಡದಿಂದ ಮತಗಟ್ಟೆ ಪರಿಶೀಲನೆ : ಕಾರಣವೇನು
ಶಿವಮೊಗ್ಗ : ಮುಂಬರುವ ಚುನಾವಣೆಗೆ ಸಿದ್ಧತೆಗಳ ಭಾಗವಾಗಿ, ಭಾರತ ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಸೆಪ್ಟೆಂಬರ್ 1ರಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಮತಗಟ್ಟೆಗಳ ಪರಿಶೀಲನೆ ನಡೆಸಿತು.
Election commision ಜಿಲ್ಲಾ ಭೇಟಿಯ ಸಂದರ್ಭದಲ್ಲಿ, ತಂಡವು ಮಹಾನಗರಪಾಲಿಕೆ ಕಚೇರಿಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಒ) ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿತು. ಈ ಸಂದರ್ಭದಲ್ಲಿ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳ ಮೂಲ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ವಿಶ್ಲೇಷಿಸಿದರು. ನಂತರ, ತಂಡವು ಮತಗಟ್ಟೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರಿಸಿತು.
ತರಬೇತಿ ಕಾರ್ಯಕ್ರಮದ ನಂತರ, ಆಯೋಗದ ತಂಡವು 111-ಶಿವಮೊಗ್ಗ ಗ್ರಾಮಾಂತರ ಮತ್ತು 117-ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮತಗಟ್ಟೆಗಳಲ್ಲಿ ಅಗತ್ಯವಿರುವ ಕನಿಷ್ಠ ಮೂಲಸೌಕರ್ಯಗಳು ಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡರು.
ಅಲ್ಲದೆ, ಹಿಂದಿನ ಸಂಸತ್ ಮತ್ತು ವಿಧಾನಸಭಾ ಚುನಾವಣೆಗಳ ಮತದಾನದ ಪ್ರಮಾಣ, ಪ್ರಸ್ತುತ ಮತದಾರರ ಪಟ್ಟಿಗೆ ಸೇರಿಸಲಾದ, ಕೈಬಿಡಲಾದ ಮತ್ತು ತಿದ್ದುಪಡಿ ಮಾಡಿದ ಮತದಾರರ ಸಂಖ್ಯೆಯ ವಿವರಗಳನ್ನು ಸಹ ತಂಡವು ಸಂಗ್ರಹಿಸಿತು. ದೋಷರಹಿತ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳುವುದು, ಮತದಾರರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು, ಮತ್ತು ಜಿಲ್ಲೆಯಾದ್ಯಂತ ಚುನಾವಣೆಗಳು ಸುಗಮವಾಗಿ ನಡೆಯುವುದನ್ನು ಖಾತ್ರಿಪಡಿಸುವುದು ಈ ಭೇಟಿಯ ಮುಖ್ಯ ಉದ್ದೇಶ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
