ದನಗಳ ಮೈಮೇಲಿನ ಉಣ್ಣೆ ತೆಗೆಯಲು ಬಳಸುವ ವಿಷಯುಕ್ತ ಔಷಧಿ ಬಾಟಲ್ ನುಂಗಿದ ನಾಗರ ಹಾವು!
Cobra swallows a bottle of poisonous medicine used to remove wool from cows!
Feb 11, 2024 | ಹಾವೊಂದು ವಿಷದ ಬಾಟಲ್ ನುಂಗಿ ಪರಿಪಾಟಲು ಪಡುತ್ತಿರುವುದನ್ನ ತಪ್ಪಿಸಿ, ಅದನ್ನ ಸಂರಕ್ಷಿಸಿದ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಈ ದೃಶ್ಯ ವೈರಲ್ ಆಗುತ್ತಿದೆ. ಹಸುವಿನ ಮೈ ಮೇಲಿನ ಉಣ್ಣೆಗಳನ್ನು ನಿವಾರಣೆ ಮಾಡಲು ಬಳಸುವ ಔಷಧಿ ಬಾಟಲ್ವೊಂದನ್ನ ಹಾವು ನುಂಗಿಬಿಟ್ಟಿತ್ತು. ಉಣ್ಣೆಗೆ ಬಳಸುವ ಔಷಧಿ ಬಾಟಲ್ನಲ್ಲಿ ವಿಷದ ಅಂಶಗಳು ಸಹ ಇರುತ್ತವೆ. ನಾಗರಹಾವು ಈ ಬಾಟಲಿಯನ್ನೆ ನುಂಗಿತ್ತು.
ಉಡುಪಿಯ ನೀರೆ ಬೈಲೂರಿನಲ್ಲಿ ಇಂತಹದ್ದೊಂದು ದೃಶ್ಯವನ್ನ ಕಂಡ ಸ್ಥಳೀಯ ಜಗದೀಶ್ ಎಂಬವರು ಉಡುಪಿಯ ಉರಗ ಸಂರಕ್ಷಕ ಗುರುರಾಜ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಬಂದ ಅವರು, ಹಾವನ್ನ ಹುಡುಕಾಡಿದ್ದಾರೆ. ಅಷ್ಟರಲ್ಲಿ ಹಾವು ಶೌಚಾಲಯದ ನೆಲದಡಿ ಸೇರಿಕೊಂಡಿತ್ತು. ಆ ಬಳಿಕ ಟಾಯ್ಲೆಟ್ನ ಅಡಿಪಾಯದ ಕಲ್ಲುಗಳನ್ನು ಕಿತ್ತು ಹಾವನ್ನ ಹೊರಕ್ಕೆ ತೆಗೆಯಲಾಗಿದೆ.
ಬಳಿಕ ಹಾವನ್ನ ಹಿಡಿದು ಅದರ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ತಳ್ಳುತ್ತಾ ಹೊರ ತೆಗೆದಿದ್ದಾರೆ. ನೀರೆ ಗ್ರಾಮದ ರಿತೇಶ್ ಎಂಬವರು ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸ್ಥಳೀಯರ ವಿನಂತಿ ಮೇರೆಗೆ ಹಾವನ್ನು ನೀರೆ ಬೈಲೂರು ಸಮೀಪ ಕಾಡಿಗೆ ಬಿಡಲಾಗಿದೆ.