ATM card swapping scam ಶಿವಮೊಗ್ಗ : ಎಟಿಎಂ ಯಂತ್ರದಲ್ಲಿ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಅಪರಿಚಿತನೊಬ್ಬ ವ್ಯಕ್ತಿಯೊಬ್ಬರ ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ, ಅವರ ಖಾತೆಯಿಂದ 18,600 ನಗದು ಹಣವನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ವ್ಯಕ್ತಿಯೊನಬ್ಬರು ಭದ್ರಾವತಿಗೆ ಆಗಮಿಸಿದ್ದರು. ಹಣದ ಅವಶ್ಯಕತೆ ಇದ್ದ ಕಾರಣ ಅಲ್ಲಿಯೇ ಇದ್ದ ಕೆನರಾ ಬ್ಯಾಂಕ್ ಎಟಿಎಂಗೆ ಹೋಗಿದ್ದರು. ಅಲ್ಲಿ ತಮ್ಮ ಹೆಂಡತಿ ಅವರ ಹೆಸರಿನಲ್ಲಿದ್ದ ಉಳಿತಾಯ ಖಾತೆಯ ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ, ಎಟಿಎಂ ಒಳಗಡೆ ಬಂದ ಅಪರಿಚಿತ ವ್ಯಕ್ತಿಯೊಬ್ಬರು, ನಾನು ಹಣ ತೆಗೆದು ಕೊಡುತ್ತೇನೆ ಎಂದು ಹೇಳಿ ಅವರ ಬಳಿಯಿದ್ದ ಎಟಿಎಂ ಕಾರ್ಡ್ ಪಡೆದುಕೊಂಡಿದ್ದಾರೆ. ಆ ವ್ಯಕ್ತಿ ಎರಡು-ಮೂರು ಬಾರಿ ಕಾರ್ಡ್ ಅನ್ನು ಎಟಿಎಂ ಯಂತ್ರದೊಳಗೆ ಹಾಕಿ ಹಣ ಬರುತ್ತಿಲ್ಲ ಎಂದು ಹೇಳಿ ಕಾರ್ಡ್ ಅನ್ನು ವಾಪಸ್ ನೀಡಿದ್ದಾರೆ. ರಾಮಚಂದ್ರ ಅವರು ಆ ಕಾರ್ಡ್ ತೆಗೆದುಕೊಂಡು ಮನೆಗೆ ಹೋಗಿರುತ್ತಾರೆ.
ಮರುದಿನ, ದೂರುದಾರರು ಅವರು ತಮ್ಮ ಹೆಂಡತಿಯೊಂದಿಗೆ ಹೊಳೆಹೊನ್ನೂರಿನ ಕೆನರಾ ಬ್ಯಾಂಕ್ ಶಾಖೆಗೆ ಹೋಗಿ ಪಾಸ್‌ಬುಕ್ ಪರಿಶೀಲಿಸಿದಾಗ ವಂಚನೆಯ ವಿಷಯ ಬೆಳಕಿಗೆ ಬಂದಿದೆ. ಅಕ್ಟೋಬರ್ 10 ರಂದು ಶಿವಮೊಗ್ಗದ ಒಂದು ಎಟಿಎಂನಲ್ಲಿ, ವಂಚಕರು ಒಂದು ಬಾರಿ 10,000 ಮತ್ತು ಇನ್ನೊಂದು ಬಾರಿ 8,600 ಹೀಗೆ ಒಟ್ಟು 18,600 ನಗದು ಹಣವನ್ನು ವಿತ್‌ಡ್ರಾ ಮಾಡಿರುವುದು ತಿಳಿದು ಬಂದಿದೆ.
ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ, ರಾಮಚಂದ್ರ ಅವರ ಮೂಲ ಕಾರ್ಡ್ ತೆಗೆದುಕೊಂಡು ಹೋಗಿ ಹಣ ಕಳವು ಮಾಡಿ ವಂಚಿಸಿರುತ್ತಾರೆ ಎಂದು ಆರೋಪಿಸಿ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

