AI Breast Cancer Detection :ಶಿವಮೊಗ್ಗ: ಸ್ತನ ಕ್ಯಾನ್ಸರ್ ಗಡ್ಡೆಗಳನ್ನು ಕ್ಷಣ ಮಾತ್ರದಲ್ಲಿ, ಅತ್ಯಂತ ಕರಾರುವಕ್ಕಾಗಿ ಮತ್ತು ನೋವು ರಹಿತವಾಗಿ ಪತ್ತೆ ಹಚ್ಚಬಲ್ಲ ಥರ್ಮಾಲಿಟಿಕ್ಸ್ ಎಂಬ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ಯಂತ್ರವು ಈಗ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯವಾಗಿದೆ.
ಈ ನೂತನ ಮತ್ತು ವಿಕಿರಣ ರಹಿತ ತಂತ್ರಜ್ಞಾನವು, ಸಾಂಪ್ರದಾಯಿಕ ಮ್ಯಾಮೋಗ್ರಾಫಿ ಪ್ರಕ್ರಿಯೆಯಲ್ಲಿ ಸ್ತನಗಳನ್ನು ಪ್ಲೇಟ್‌ಗಳ ನಡುವೆ ಒತ್ತಿ ನೋವು ಅನುಭವಿಸಬೇಕಾಗಿದ್ದ ಸಮಸ್ಯೆಗೆ ಪರಿಹಾರ ನೀಡಿದೆ. ಥರ್ಮಾಲಿಟಿಕ್ಸ್ ವಿಧಾನದಲ್ಲಿ ಮಹಿಳೆಯರು ಉಡುಪುಗಳನ್ನು ತೆಗೆದುಹಾಕುವ ಅಥವಾ ನೋವು ಅನುಭವಿಸುವ ಅಗತ್ಯವಿಲ್ಲ. ಬದಲಾಗಿ, ಉಟ್ಟ ಬಟ್ಟೆಯಲ್ಲೇ ಯಂತ್ರದ ಮುಂದೆ ನಿಂತರೆ ಸಾಕು. ಈ ಯಂತ್ರವು ಉನ್ನತ ಗುಣಮಟ್ಟದ ತಾಪಮಾನ ಸಂವೇದನೆ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿ ಸ್ತನದ ಉಷ್ಣ ಮಾದರಿಗಳನ್ನು ವಿಶ್ಲೇಷಿಸುತ್ತದೆ. ಇದು ಐದು ವಿಭಿನ್ನ ತಾಪಮಾನ ಚಿತ್ರಗಳನ್ನು ಸೆರೆಹಿಡಿದು, ಸಮಮಿತಿ ರಚನೆ ಹಾಗೂ ರಕ್ತಪ್ರವಾಹದಂತಹ ಅಂಶಗಳನ್ನು ವಿಶ್ಲೇಷಿಸುವ ಮೂಲಕ, ಕೆಲವೇ ನಿಮಿಷಗಳಲ್ಲಿ ಸ್ತನದಲ್ಲಿರುವ ಸಂಭವನೀಯ ಅಸಾಮಾನ್ಯತೆಗಳನ್ನು ನಿಖರವಾಗಿ ಗುರುತಿಸುತ್ತದೆ. ಈ ಕಾರಣದಿಂದಾಗಿ, ಇದು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಮತ್ತು ವಿವಿಧ ಸ್ತನ ಸಾಂದ್ರತೆ (Density) ಇರುವವರಿಗೂ ಸೂಕ್ತವಾಗಿದೆ.
AI Breast Cancer Detection ಈ ಯಂತ್ರದ ಮಹತ್ವದ ಕುರಿತು ಮಾತನಾಡಿದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಮೆಡಿಕಲ್ ಆಂಕಾಲಾಜಿಸ್ಟ್ ಡಾ. ಅಪರ್ಣ ಶ್ರೀವತ್ಸ ಅವರು, ನಾಲ್ಕು ಲಕ್ಷಕ್ಕೂ ಹೆಚ್ಚು ಮಹಿಳೆಯರ ಡೇಟಾದ ಆಧಾರದ ಮೇಲೆ ತರಬೇತುಗೊಳಿಸಲಾದ ಈ ಕೃತಕ ಬುದ್ಧಿಮತ್ತೆ ವ್ಯವಸ್ಥೆಯು, ಯುವ ಮತ್ತು ಕ್ಯಾನ್ಸರ್ ಲಕ್ಷಣಗಳಿಲ್ಲದ ಮಹಿಳೆಯರಲ್ಲಿಯೂ ಗಡ್ಡೆಗಳನ್ನು ಪತ್ತೆಹಚ್ಚಲು ವಿಶೇಷವಾಗಿ ಉಪಯುಕ್ತವಾಗಿದೆ. ನಿಯಮಿತ ತಪಾಸಣೆಯ ಮೂಲಕ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ತಡೆಯಲು ಸಾಧ್ಯವಿದೆ. ಯಾವುದೇ ಅಸಾಮಾನ್ಯತೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಕಾಣುವುದು ಅತಿ ಮುಖ್ಯ,” ಎಂದರು.
ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗೀಸ್ ಪಿ. ಜಾನ್ ಅವರು ಮಾತನಾಡಿ, “ಈ ಉನ್ನತ ಮಟ್ಟದ AI ಆಧಾರಿತ ಥರ್ಮಾಲಿಟಿಕ್ಸ್ ಯಂತ್ರವನ್ನು ಪರಿಚಯಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಇದು ಸ್ತನ ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವಲ್ಲಿ ಕ್ರಾಂತಿಕಾರಿಯಾಗಿದ್ದು, ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ನೀಡಲು ಸಹಕಾರಿ ಆಗುತ್ತದೆ. ಈ ಯಂತ್ರದ ಅಳವಡಿಕೆಯಿಂದ, ನಮ್ಮ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಮತ್ತು ತಪಾಸಣೆಗಾಗಿ ಬರುವ ಮಹಿಳೆಯರಿಗೆ ಅತ್ಯಾಧುನಿಕ, ನಿಖರ ಮತ್ತು ಸಂಪೂರ್ಣ ಕ್ಯಾನ್ಸರ್ ಚಿಕಿತ್ಸೆ ನೀಡುವ ನಮ್ಮ ಬದ್ಧತೆ ಬಲಗೊಂಡಿದೆ,” ಎಂದು ಹೇಳಿದರು.
AI Breast Cancer Detection


