Aadhaar update : ಶಿವಮೊಗ್ಗ: ದಶಕಗಳ ಹಿಂದೆ ಆಧಾರ್ ಕಾರ್ಡ್ ನೋಂದಣಿ ಮಾಡಿಸಿದವರು ತಮ್ಮ ದಾಖಲೆಗಳನ್ನು ನವೀಕರಿಸಿಕೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಇದನ್ನು ಹತ್ತಿರದ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಆಧಾರ್ ಸೇವಾ ಕೇಂದ್ರಗಳಲ್ಲಿ ಮಾಡಿಸಬಹುದಾಗಿದೆ.
ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಐದು ವರ್ಷದೊಳಗಿನ ಮಕ್ಕಳ ಪೋಷಕರು ಕಡ್ಡಾಯವಾಗಿ ಆಧಾರ್ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಈಗಾಗಲೇ ಆಧಾರ್ ಹೊಂದಿರುವ 5 ವರ್ಷ ತುಂಬಿದ 92,317 ಮಕ್ಕಳು ಮತ್ತು 15 ವರ್ಷ ಮೇಲ್ಪಟ್ಟ 85,209 ಮಕ್ಕಳು ಬಯೋಮೆಟ್ರಿಕ್ ಗುರುತು ನೀಡಿ ತಮ್ಮ ಆಧಾರ್ ಅನ್ನು ನವೀಕರಿಸಿಕೊಳ್ಳಬೇಕು ಎಂದು ಹೇಳಿದರು.
Aadhaar update ಶಾಲಾ ಮಕ್ಕಳ ಆಧಾರ್ ನೋಂದಣಿಗೆ ಒತ್ತು
ಜಿಲ್ಲೆಯಲ್ಲಿ ಸುಮಾರು 27,533 ಮಕ್ಕಳು ಇನ್ನೂ ಆಧಾರ್ ನೋಂದಣಿ ಮಾಡಿಸಿಲ್ಲ ಎಂದು ಅಂದಾಜಿಸಲಾಗಿದೆ. ಈ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಲ್ಲಿಯೇ ಆಧಾರ್ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಶಾಲಾ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು, ಶಿಕ್ಷಕರಿಗೆ ನೋಂದಣಿ ಕುರಿತು ತರಬೇತಿಯನ್ನೂ ನೀಡಲಾಗಿದೆ.
ಶೇ.26.03ರಷ್ಟು ಮಕ್ಕಳ ಆಧಾರ್ ದಾಖಲೆಗಳಲ್ಲಿರುವ ಹೆಸರು, ವಿಳಾಸ, ಮತ್ತು ಮೊಬೈಲ್ ಸಂಖ್ಯೆಗಳಲ್ಲಿ ವ್ಯತ್ಯಾಸಗಳಿದ್ದು, ಅವುಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ಆಧಾರ್ ನೋಂದಣಿ ಮತ್ತು ನವೀಕರಣವನ್ನು ಹೆಚ್ಚಿಸಲು ಬ್ಯಾಂಕ್‌ಗಳು ಮತ್ತು ಶಾಲೆಗಳ ಹಂತದಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ಒಂದು ವರ್ಷದೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಶಾಲಾ ಮಕ್ಕಳಿಗೆ ಆಧಾರ್ ನೋಂದಣಿ ಮಾಡಿಸುವುದು ಬಹಳ ಮುಖ್ಯ. ಏಕೆಂದರೆ ಇದು ಶೈಕ್ಷಣಿಕ ಚಟುವಟಿಕೆಗಳಿಗೆ, ಸಿ.ಇ.ಟಿ. ಹಾಗೂ ಇತರ ಪ್ರವೇಶ ಪರೀಕ್ಷೆಗಳಿಗೆ, ಮತ್ತು ವಿದ್ಯಾರ್ಥಿವೇತನ ಪಡೆಯಲು ಸಹಕಾರಿಯಾಗಿದೆ. ಆಧಾರ್ ಇಲ್ಲದಿದ್ದರೆ ಮಕ್ಕಳು ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ ಎಂದು ಸಿದ್ಧಲಿಂಗರೆಡ್ಡಿ ಎಚ್ಚರಿಸಿದರು.
ಯಾವುದೇ ಅನಧಿಕೃತ ಅಥವಾ ವಂಚನೆಯ ಚಟುವಟಿಕೆಗಳು ಕಂಡುಬಂದರೆ, ಅಥವಾ ಅಕ್ರಮ ವಲಸಿಗರು ಆಧಾರ್ ಪಡೆಯಲು ಪ್ರಯತ್ನಿಸಿದರೆ, ಜಿಲ್ಲಾ ಕಾನೂನು ಜಾರಿ ಪ್ರಾಧಿಕಾರ (ಪೊಲೀಸ್ ಅಧೀಕ್ಷಕರು) ಎಫ್‌ಐಆರ್ ದಾಖಲಿಸಿ, ಆಧಾರ್ ಕಾಯ್ದೆಯನ್ವಯ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.