Malenadu today news report | 62 years ago |62 ವರ್ಷಗಳ ಹಿಂದೆ! ಶಿವಮೊಗ್ಗ ಎಸ್ಪಿ ಕಛೇರಿ ಯಲ್ಲಿಯೇ ನಡೆದಿತ್ತು ಎಸ್ಪಿ ಮತ್ತು ಇನ್ ಸ್ಪೆಕ್ಟರ್ ಹತ್ಯೆ! ಗುಂಡಿಕ್ಕಿ ಕೊಲೆ ಮಾಡಿದ ಆ ಪೊಲೀಸ್ ಅಧಿಕಾರಿ ಯಾರು? ದೇಶವನ್ನೇ ತಲ್ಲಣಗೊಳಿಸಿದ್ದ ಆ ಘಟನೆ ನಡೆದಿದ್ದೇಕೆ!? ಇದು JP Sunday Flashback
ಶಿವಮೊಗ್ಗ ಜಿಲ್ಲೆ ರಾಜಕೀಯವಾಗಿ ಸಾಂಸ್ಕ್ರತಿಕವಾಗಿ ನೈಸರ್ಗಿಕವಾಗಿ ಎಷ್ಟು ಶ್ರೀಮಂತಿಕೆಯನ್ನು ಹೊಂದಿದೆಯೋ..ಅದೇ ರೀತಿ ಅಪಖ್ಯಾತಿಯ ನೆರಳು ಕೂಡ ಜಿಲ್ಲೆಯನ್ನು ಭಾದಿಸಿದೆ.ಆ ಅಪಖ್ಯಾತಿಯ ಸಾಲಿನಲ್ಲಿ ಇತಿಹಾಸದಲ್ಲಿ ಎಂದು ಅಳಿಸಲಾಗದ ಕರಾಳ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
62 ವರ್ಷಗಳ ಹಿಂದೆ!
1960 ರಲ್ಲಿಯೇ ಶಿವಮೊಗ್ಗದಲ್ಲಿ ಎಸ್ಪಿ ಕಛೇರಿಯಲ್ಲಿಯೇ ಎಸ್ಪಿ ಹಾಗು ಇನ್ಸ್ ಪೆಕ್ಟರ್ ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು ಎಂಬ ವಿಷಯ ಈಗಲೂ ಮೈ ಜುಮ್ಮೆನಿಸುತ್ತೆ.ಹೊರರಾಜ್ಯಗಳಲ್ಲಿ ಕಿರಿಯ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ಬಂದೂಕಿನಿಂದ ಹೊಡೆದ ಘಟನೆಗಳನ್ನಷ್ಟೆ ಕೇಳಿದ್ದ ಜನರಿಗೆ ಶಿವಮೊಗ್ಗದಲ್ಲಿ ಕೂಡ ಇಂತಹ ಘಟನೆ ನಡೆದಿತ್ತಾ ಎಂದು ಅನುಮಾನ ಪಟ್ಟರೆ ಪ್ರಯೋಜನವಿಲ್ಲ. ಅಂತಹ ಘಟನೆ 60 ರ ದಶಕದಲ್ಲೇ ನಡೆದಿದ್ದು, ದೇಶವನ್ನೇ ತಲ್ಲಣಗೊಳಿಸಿತ್ತು.
ಮಿಂಚು ಶ್ರೀನಿವಾಸ್ ಹಾಗೂ ಕ್ರಾಂತಿದೀಪ ಪತ್ರಿಕೆ
ಈ ಘಟನೆಯನ್ನು ಹಿರಿಯ ಪತ್ರಕರ್ತ ಮಿಂಚು ಶ್ರೀನಿವಾಸ್ “ಕ್ರಾಂತಿದೀಪ” ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಅದನ್ನು ಬರಹದ ರೂಪದಲ್ಲಿ ದಾಖಲಿಸಿದ್ದಾರೆ.1960 ರಲ್ಲಿ ಪತ್ರಕರ್ತ ಮಿಂಚು ಶ್ರೀನಿವಾಸ್ ಹಾಗು ಅವರ ಗೆಳೆಯ, ಸೀತರಾಮ ಅಯ್ಯಾಂಗಾರ್ ನಡುವೆ ವಿವಾದ ಉಂಟಾಗಿತ್ತು.ಈ ಕಾರಣಕ್ಕೆ ಮಿಂಚು ಶ್ರೀನಿವಾಸ್ “ಜಾಗೃತಿ” ಪತ್ರಿಕೆ ಬಿಟ್ಟು “ಸ್ವತಂತ್ರ” ಎಂಬ ದಿನಪತ್ರಿಕೆಯನ್ನು ಆರಂಭಿಸಲು ನಿರ್ಧರಿಸಿದರು.ಅಂತೆಯೇ ಪತ್ರಿಕೆ ಅನುಮತಿಗಾಗಿ ಮಿಂಚು ಶ್ರೀನಿವಾಸ್ ಮತ್ತು ಶ್ರೀನಿವಾಸ್ ಅಯ್ಯಾಂಗಾರ್ ಇಬ್ಬರು ಅಂದಿನ ಎಸ್ಪಿ ಐ.ಆರ್.ರಾಯಚೂರ್ ಎಂಬುವರನ್ನು ಭೇಟಿ ಮಾಡಲು ಅಣಿಯಾದರು.
ಅಂದಿನ ಎಸ್ಪಿ ಐಆರ್.ರಾಯಚೂರ್!
ಐ.ಆರ್ ರಾಯಚೂರು ರವರು ತುಂಬಾ ಹಠವಾದಿ ಹಾಗು ದಿನದ ಇಪ್ಪತ್ತನಾಲ್ಕು ಗಂಟೆಯೂ ಆವೇಶದಲ್ಲಿಯೇ ಇರುತ್ತಿದ್ದ ವ್ಯಕ್ತಿಯಾಗಿದ್ದರು.ಜೀ ಹುಜೂರ್ ಎಂದು ಸಲಾಂ ಹೊಡೆಯುವವರೆಗಷ್ಟೆ ಮಣೆ ಹಾಕುತ್ತಿದ್ದ ವ್ಯಕ್ತಿಯಂತೆ. ಅವರನ್ನು ವಿರೋಧಿಸುವವರಿಗೆ ವಾಚಾಮಗೋಚರವಾಗಿ ನಿಂದಿಸುತ್ತಿದ್ದರಂತೆ.
ಚೆಲ್ಲ ಪೆರುಮಾಳ್ ಜೊತೆ ಕಿರಿಕ್!
ಹೀಗಾಗಿ ರಾಯಚೂರು ತಮ್ಮ ಪೊಲೀಸ್ ಸಿಬ್ಬಂದಿಗಳ ಸಂಗಡ ನಿಷ್ಠೂರ ಕಟ್ಟಿಕೊಂಡಿದ್ದರು.
ಇಂತಹವರ ಸಾಲಿನಲ್ಲಿ ಅಗ್ರಪಕ್ತಿಯಲ್ಲಿದ್ದವರೇ ಆಗಿನ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಚೆಲ್ಲ ಪೆರುಮಾಳ್.
ಪತ್ರಕರ್ತರಿಬ್ಬರು ಎಸ್ಪಿ ನೋಡಲು ಹೋದ ದಿನವೇ ಎಸ್ಸೈ ಜೊತೆ ಎಸ್ಪಿ ಜಗಳ ಆರಂಭವಾಗಿತ್ತು.
ದಿನಾಂಕ 09-03-1960
ದಿನಾಂಕ 09-03-1960 ರ ಸಂಜೆ ಎಸ್ಪಿ ರಾಯಚೂರರನ್ನು ನೋಡಲು ಮಿಂಚು ಶ್ರೀನಿವಾಸ್ ಮತ್ತು ಶ್ರೀನಿವಾಸಯ್ಯಾಂಗಾರ್ ಎಸ್ಪಿ ಕಛೇರಿಗೆ ತೆರಳಿದರು.
ಇಬ್ಬರು ಉತ್ಸಾಹಿ ಯುವ ಪತ್ರಕರ್ತರಾಗಿದ್ದು,ಪ್ರಾಮಾಣಿಕವಾಗಿದ್ದರಿಂದ ಎಸ್ಪಿ ರಾಯಚೂರು ಅವರಿಗೆ ಇವರ ಮೇಲೆ ಗೌರವವಿತ್ತು.
ಆದರೆ ಇವರು ಎಸ್ಪಿ ಕಛೇರಿಗೆ ಹೋದ ಸಂದರ್ಭದಲ್ಲಿಯೇ ಸಬ್ ಇನ್ಸ್ ಪೆಕ್ಟರ್ ಪೆರುಮಾಳ್ ಗೂ ಮತ್ತು ಎಸ್ಪಿ ರಾಯಚೂರು ನಡುವೆ ಯಾವುದೋ ವಿಷಯದಲ್ಲಿ ಮಾತಿನ ಚಕಮಕಿ ನಡೆದಿತ್ತು.
ಕೆರಳಿದ ಎಸ್ಪಿ ರಾಯಚೂರ್ ನಿನ್ನ ಡ್ರೆಸ್ ಬಿಚ್ಚಿಸುತ್ತೇನೆ ಎಂದು ಪೆರುಮಾಳ್ ಗೆ ಹೇಳಿದಾಗ ಆತ ಕೆಂಗಣ್ಣು ಬೀರಿ ಕಚೇರಿಯಿಂದ ಹಾಗೆಯೇ ಹೊರಟು ಹೋದರು.
ಹಿರಿಯ ಪತ್ರಕರ್ತರಿಬ್ಬರಿಗೆ ಇವರ ನಡುವೆ ನಡೆದ ವಾಗ್ವಾದದ ಕಾರಣ ಗೊತ್ತಿರಲಿಲ್ಲ.
ಎಸ್ಪಿ ಒಳ್ಳೆಯ ಮೂಡ್ ನಲ್ಲಿ ಇಲ್ಲ ಎಂದುಕೊಳ್ಳುವಾಗಲೇ ರಾಯಚೂರು ನಾಳೆ 10 ಗಂಟೆಗೆ ಬನ್ನಿ ಮಾತಾಡೋಣ ಎಂದು ಹೇಳಿದಾಗ ಮಿಂಚು ಶ್ರೀನಿವಾಸ್ ಮತ್ತು ಶ್ರೀನಿವಾಸ್ ಅಯ್ಯಾಂಗಾರ್ ವಾಪಸ್ಸಾದರು.
ಪತ್ರಕರ್ತರ ಜೊತೆ ಟೀ ಕುಡಿದ ಪೆರುಮಾಳ್. ತಾನೇ ಬಿಲ್ ಪಾವತಿಸಿದ
ಕಾಫಿ ಕುಡಿಯುತ್ತಿದ್ದಾಗ ಸಬ್ ಇನ್ಸ್ ಪೆಕ್ಟರ್ ಪೆರುಮಾಳ್ ಅಲ್ಲಿಗೆ ಬಂದಾಗ ತುಂಬಾ ಉದ್ರಿಕ್ತನಾಗಿದ್ದ.ಪತ್ರಕರ್ತರಿಬ್ಬರನ್ನು ನೋಡಿದ ಪೆರುಮಾಳ್ ಅವರ ಸನಿಹ ಹೋಗಿ ಕಾಫಿ ಸೇವಿಸಿ, ಮಿಂಚು ಶ್ರೀನಿವಾಸ್ ಗೆ ಸಿಗರೇಟು ಕೊಟ್ಟು,ಈ ಎಸ್ಪಿಗೆ ಮಾನವೀಯತೆಯೇ ಇಲ್ಲ ಎಂದು ಗೊಣಗಲು ಆರಂಭಿಸಿದ್ದರು.ಕೊನೆಗೆ ಬರುವಾಗ ಪತ್ರಕರ್ತರಿಬ್ಬರ ಹೋಟೆಲ್ ಬಿಲ್ ನ್ನು ಪೆರುಮಾಳ್ ಗೆ ಕೊಟ್ಟು ಸೈಕಲ್ ಹತ್ತಿ ಹೋದರು.
ಎಸ್ಪಿ ಹೇಳಿದ ದಿನದಂದು ಪತ್ರಕರ್ತರಿಬ್ಬರು ಕಛೇರಿಗೆ ಹೋದಾಗ ರಕ್ತದೋಕುಳಿ ಹರಿದಿತ್ತು.
ಮಾರನೇ ದಿನ ಅಂದರೆ 10-03-60 ದಿನ ಎಸ್ಪಿ ರಾಯಚೂರು ಹೇಳಿದಂತೆ ಮಿಂಚು ಶ್ರಿನಿವಾಸ್ ಮತ್ತು ಶ್ರೀನಿವಾಸ್ ಅಯ್ಯಾಂಗಾರ್ ಎಸ್ಪಿ ಕಾಣಲು ಕಚೇರಿಗೆ ತೆರಳುತ್ತಾರೆ.
ಆದರೆ ಅವರ ಕಛೇರಿಗೆ ಹೋಗುವಷ್ಟರಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಾವಿರಾರು ಜನ ಜಮಾಯಿಸಿದ್ದರು.
ಆ ವೇಳೆಗಾಗಲೇ ಪೆರುಮಾಳ್ ಎಸ್ಪಿ ಕಛೇರಿಗೆ ನುಗ್ಗಿ ಮೊದಲು ಇನ್ಸ್ ಪೆಕ್ಟರ್ ಸೈಯ್ಯದ್ ಮಾಝಾಗೆ ಗುಂಡಿಕ್ಕಿ ನಂತರ ಎಸ್ಪಿಗೆ ರಿವಾಲ್ವಾರ್ ನಿಂದ ಶೂಟ್ ಮಾಡಿ ಪರಾರಿಯಾಗಿದ್ದರು.
ಎಸ್ಪಿಯನ್ನೆ ಕೊಲೆ ಮಾಡುವಷ್ಟರ ಮಟ್ಟಿಗೆ ಎಸ್ಸೈ ಪೆರುಮಾಳ್ ಗೆ ರೋಷ ಉಕ್ಕಲು ಕಾರಣವೇನು
1960 ರ ಸುಮಾರಿಗೆ ಸೊರಬ ಠತಾಲೂಕಿನಲ್ಲಿ ಇನ್ಸ್ ಪೆಕ್ಟರ್ ಆಗಿ ಸೈಯದ್ ಮಾಝಾ ಕರ್ತವ್ಯದಲ್ಲಿದ್ದರು.
ಈತನಿಗೂ ಎಸ್ಪಿ ರಾಯಚೂರ್ ಗೂ ಕ್ಷುಲ್ಲಕ ಕಾರಣಕ್ಕೆ ಬಿರುಕಿತ್ತು. ಮಾಮೂಲಿ ವ್ಯವಹಾರದಲ್ಲಿ ಸೈಯದ್ ಮಾಝಾ ಭೂ ಮಾಲೀಕರ ಪರವಾಗಿದ್ದರೆ, ಎಸ್ಸೈ ಪೆರುಮಾಳ್ ಬಡ ಗೇಣಿದಾರರ ಪರವಾಗಿದ್ದರು.
ಜಿಲ್ಲಾ ರಕ್ಷಣಾಧಿಕಾರಿ ರಾಯಚೂರುರವರು,ತಮ್ಮ ಕಛೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದ ಸಂದರ್ಭದವುದು.
ಆಗ ಸೈಯದ್ ಮಾಝಾ ಎಸ್ಸೈ ಪೆರುಮಾಳ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ಅಲ್ಲದೆ ಇದೇ ಗೇಣಿದಾರರ ವಿಚಾರದಲ್ಲಿ ಎಸ್ಪಿಗೆ ಹೇಳಿ ಪೆರುಮಾಳ್ ರನ್ನು ಅಮಾನತ್ತು ಮಾಡಿಸುವಲ್ಲಿ ಸೈಯದ್ ಯಶಸ್ವಿಯಾಗಿದ್ದರು.
ಸಮವಸ್ತ್ರದಲ್ಲಿಯೇ ಎಸ್ಪಿ ಕಚೇರಿಗೆ ಬಂದ ಪೆರುಮಾಳ್.
ಎಸ್ಪಿ ಕಛೇರಿಯಲ್ಲಿ ನಡೆದ ಕ್ರೈಂ ಮೀಟಿಂಗ್ ನಲ್ಲಿ ತಮಗಾದ ಅವಮಾನವನ್ನು ಸಹಿಸದ ಪೆರುಮಾಳ್ ಉಗ್ರರೂಪ ತಾಳಿದ.
ಮಾರನೇ ದಿನವೇ ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗೆ ಸಮವಸ್ತ್ರದಲ್ಲೇ ಬಂದ ಪೆರುಮಾಳ್, ಮೊದಲು ಸೈಯ್ಯದ್ ಮಾಝಾಗೆ ಗುಂಡಿಕ್ಕಿ ನಂತರ ಎಸ್ಪಿ ರಾಯಚೂರಿಗೆ ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾದ. ಈ ಘಟನೆ ದೇಶದಲ್ಲೆಡೆ ಸಂಚಲವ ಸೃಷ್ಟಿಸಿತು.
ನೇಣುಗಂಬಕ್ಕೇರಿದ ಎಸ್ಐ ಪೆರುಮಾಳ್
ಎಸ್ಪಿ ರಾಯಚೂರು ಮತ್ತು ಸೈಯದ್ ಮಾಝಾ ಕೊಲೆ ಮಾಡಿದ ಪೆರುಮಾಳ್ ನಂತರ ಲಾರಿ ಹತ್ತಿ ಹರಿಹರಕ್ಕೆ ಹೋಗಿ ಅಲ್ಲಿಂದ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ.
ಆ ವೇಳೆಗಾಗಲೇ ಪೆರುಮಾಳ್ ರ ಪತ್ತೆಗೆ ಪೊಲೀಸರು ರಾಜ್ಯಾದ್ಯಂತ ಬಲೆ ಬೀಸಿದ್ದರು. ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಪೆರುಮಾಳ್ ನನ್ನು ದಾವಣಗೆರೆ ಪೊಲೀಸರು ಬಂಧಿಸಿ ಶಿವಮೊಗ್ಗಕ್ಕೆ ಕರೆತಂದರು.
ಪೊಲೀಸರು ಆರೋಪಿ ಪೆರುಮಾಳ್ ವಿರುದ್ಧ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಪೆರುಮಾಳ್ ಗೆ ಕೆಳಗಿನ ಹಂತದ ನ್ಯಾಯಾಲಯದಿಂದ ಸುಪ್ರಿಂ ಕೋರ್ಟ್ ತನಕ ಹೋದರೂ ಮರಣದಂಡನೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾದ್ಯವಾಗಲಿಲ್ಲ.
ಕೊನೆಗೆ ರಾಷ್ಟ್ರಪತಿಯ ಕ್ಷಮಾದಾನವೂ ಸಿಗದೆ ಪೆರುಮಾಳ್ ನೇಣುಗಂಬಕ್ಕೇರುತ್ತಾರೆ. ಇದು ಶಿವಮೊಗ್ಗದ ಚರಿತ್ರೆಯಲ್ಲಿ ಎಂದೂ ಅಳಿಸಲಾಗದ ಕಹಿ ಘಟನೆಯಾಗಿ ಉಳಿದಿದೆ.
ಲಾಸ್ಟ್ ಬೈಟ್: ಎಸ್ಪಿ ರಾಯಚೂರ್ ಹತ್ಯೆಯಾಗಿದ್ದ ಕಛೇರಿ ಈಗ ಎಲ್ಲಿದೆ ಗೊತ್ತಾ.
ಎಸ್ಪಿ ಹಾಗು ಇನ್ಸ್ ಪೆಕ್ಟರ್ ಇಬ್ಬರನ್ನು ಹತ್ಯೆಗೈದ ಪೆರುಮಾಳ್ ಘಟನೆ ದೇಶದಲ್ಲೇ ಅಂದು ಚರ್ಚೆಗೀಡಾದ ವಿಚಾರವಾಗಿತ್ತು.ಹತ್ಯೆ ನಡೆದ ಸ್ಥಳ ಈಗಿನ ಆರ್.ಟಿ.ಓ ಕಛೇರಿ ಪಕ್ಕದಲ್ಲಿರುವ ಡಿ.ಎಫ್.ಓ ಕಛೇರಿಯಾಗಿದೆ.ಈಗಿನ ಹಾಲಿ ಡಿ.ಎಪ್.ಓ ಕಛೇರಿ ಅಂದು ಎಸ್ಪಿಯವರ ಕಛೇರಿಯಾಗಿತ್ತು.ಈಗ ಘಟನೆ ಮೆಲಕು ಹಾಕಲು ಯಾರು ಇಲ್ಲ.ಆದರೆ ಆ ಕಹಿ ಘಟನೆಗೆ ಹಾಲಿ ಡಿ.ಎಫ್.ಓ ಕಛೇರಿ ಇನ್ನೂ ಸಾಕ್ಷಿಭೂತವಾಗಿದೆ.ಅಂದಿನ ಈ ಹಳೇ ಘಟನೆಯನ್ನು ಎಲ್ಲರಿಗೂ ಮಾಹಿತಿಗಾಗಿ ನೀಡುತ್ತಿದ್ದೇನೆ, ಈ ಸ್ಟೋರಿ ಇಷ್ಟವಾದಲ್ಲಿ, ಸ್ನೇಹಿತರೆ ಒಂದು ರಿಪ್ಲೆ ಇರಲಿ ಹಾಗೆ ನಿಮ್ಮ ಸ್ನೇಹಿತರೊಂದಿಗೆ ಈ ಸ್ಟೋರಿಯನ್ನು ಹಂಚಿಕೊಳ್ಳಿ..
ನಿಮ್ಮವ: ಜೆಪಿ