ಮದುವೆಯಾದ 6 ತಿಂಗಳಲ್ಲೇ ನವವಿವಾಹಿತೆ ಬಲಿ: ಗಂಡ ಮತ್ತು ಅತ್ತೆ ವಿರುದ್ಧ ಕಿರುಕುಳ ಆರೋಪ, ಪತಿ ಬಂಧನ

prathapa thirthahalli
Prathapa thirthahalli - content producer

Shivamogga news : ಶಿವಮೊಗ್ಗ: ಮದುವೆಯಾದ ಕೇವಲ 6 ತಿಂಗಳಲ್ಲೇ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಕುರಂಬಳ್ಳಿ ಸಮೀಪದ ಗೂಜಾನುಮಕ್ಕಿಯಲ್ಲಿ ನಡೆದಿದೆ.  ಮಹಿಳೆ ಆತ್ಮಹತ್ಯೆಗೆ ಪತಿ ಮತ್ತು ಅತ್ತೆಯ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ.ಮೃತರಾದ ಗೃಹಿಣಿಯನ್ನು ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ಯಡಮನೆ ನಿವಾಸಿಯಾಗಿರುವ ಮಾಲಾಶ್ರೀ (23) ಎಂದು ಗುರುತಿಸಲಾಗಿದೆ.

ಯಡಮನೆ ಗ್ರಾಮದ ಮಾಲಶ್ರೀ  ಕುರಂಬಳ್ಳಿಯ ಗೂಜಾನುಮಕ್ಕಿಯ ಅಶೋಕ್ ಎಂಬಾತನೊಂದಿಗೆ ಏಪ್ರಿಲ್ 23, 2025 ರಂದು ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಿಂದ ಪತಿ ಅಶೋಕ್ ಪತ್ನಿ ಮಾಲಾಶ್ರೀಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.ಮಾಲಾಶ್ರೀಯವರು ತಮ್ಮ ತವರು ಮನೆಯವರೊಂದಿಗೆ ಮಾತನಾಡಲು ಬಿಡದೆ ಅಶೋಕ್ ಕಿರುಕುಳ ನೀಡುತ್ತಿದ್ದ. ತವರು ಮನೆಗೆ ಹೋದರೂ, ಜೊತೆಯಲ್ಲಿಯೇ ಬಂದು ತಕ್ಷಣ ವಾಪಸ್ ಕರೆದುಕೊಂಡು ಹೋಗುತ್ತಿದ್ದ. ಗಂಡ ಮತ್ತು ಅತ್ತೆ ನೀಡುತ್ತಿದ್ದ ಕಿರುಕುಳದ ಕುರಿತು ಮಾಲಾಶ್ರೀ ಅವರು ತಮ್ಮ ಸಂಬಂಧಿಕರಿಗೆ ತಿಳಿಸಿದ್ದರು ಎನ್ನಲಾಗಿದೆ. ಈ ಕಿರುಕುಳಕ್ಕೆ ಬೇಸತ್ತ ಮಾಲಾಶ್ರೀ ಅಕ್ಟೋಬರ್ 19 ರಂದು ವಿಷ ಸೇವಿಸಿದ್ದಾರೆ.

- Advertisement -

Shivamogga news ಪತಿ ಅಶೋಕ್ ಅಂದೇ ಮಾಲಾಶ್ರೀಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಪತ್ನಿ ವಿಷ ಸೇವಿಸಿರುವ ವಿಷಯವನ್ನು ಆಶೋಕ್, ಮಾಲಾಶ್ರೀಯ ಕುಟುಂಬಸ್ಥರಿಂದ 3 ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಿಟ್ಟಿದ್ದ. ಆಸ್ಪತ್ರೆಗೆ ಸೇರಿಸಿದ್ದರೂ, ವಾಂತಿ-ಬೇಧಿ ಎಂದು ಆಸ್ಪತ್ರೆಗೆ ಸೇರಿಸಿದ್ದಾಗಿ ಆಶೋಕ್ ಹೇಳಿದ್ದ ಎನ್ನಲಾಗಿದೆ.

ಅಕ್ಟೋಬರ್ 22 ರ ಮಧ್ಯಾಹ್ನ ಮಾಲಾಶ್ರೀಯ ತಂದೆ ಕರೆ ಮಾಡಿದಾಗ, ಆಶೋಕ್ ಆಕೆ ಐಸಿಯೂನಲ್ಲಿ (ICU) ಇದ್ದಾಳೆ ಎಂದು ತಿಳಿಸಿದ್ದ. ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಬಂದ ಮಾಲಾಶ್ರೀ ಅವರ ಕುಟುಂಬಸ್ಥರಿಗೆ, ಮಾಲಾಶ್ರೀ ಮೃತಪಟ್ಟಿರುವುದು ತಿಳಿದು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಮಗಳ ಸಾವಿನ ವಿಷಯ ತಿಳಿದು ಪೋಷಕರು ಆಸ್ಪತ್ರೆಗೆ ಬರುತ್ತಿದ್ದಂತೆ, ಪತಿ ಅಶೋಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ತಮ್ಮ ಮಗಳ ಸಾವಿಗೆ ಪತಿ ಅಶೋಕ್ ಮತ್ತು ಅತ್ತೆ ನೀಲಮ್ಮ ಅವರೇ ಕಾರಣ ಎಂದು ಮಾಲಾಶ್ರೀ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಅಶೋಕ್ ಮತ್ತು ಅತ್ತೆ ನೀಲಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ, ಕುಂಸಿ ಠಾಣೆಯ ಪೊಲೀಸರು ಪತಿ ಅಶೋಕ್‌ನನ್ನು ವಶಕ್ಕೆ ಪಡೆದಿದ್ದಾರೆ.

Shivamogga news

Shivamogga news
Shivamogga news

 

Share This Article
Leave a Comment

Leave a Reply

Your email address will not be published. Required fields are marked *