SHIVAMOGGA | Jan 10, 2024 | ಥಂಡಿ ವಾತಾವರಣದ ನಡುವೆ ಶಿವಮೊಗ್ಗಕ್ಕೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇವತ್ತು ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆ ಮುನ್ಸೂಚನೆ
ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಮೇಲೆ ಸುಳಿಗಾಳಿ ಪರಿಣಾಮದಿಂದ ರಾಜ್ಯದ ವಿವಿಧ ಭಾಗದಲ್ಲಿ ಮುಂದಿನ ಎರಡು ದಿನ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಲ್ಲದೆ ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಉತ್ತರ ಒಳನಾಡಿನ ಗದಗ, ಕೊಪ್ಪಳ, ರಾಯಚೂರು ಹೊರತು ಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಮನ್ಸೂಚನೆ ನೀಡಿದೆ.
ಜ.11ರಂದು ಉತ್ತರ ಕನ್ನಡ, ಚಾಮರಾಜನಗರ, ಕೋಲಾರ ಹಾಗೂ ರಾಮನಗರದಲ್ಲಿ ಮಳೆಯಾಗಲಿದೆ. ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ರಾಜ್ಯದ ವಿವಿಧ ಭಾಗದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದೆ.
ಇನ್ನೂ ಬೆಂಗಳೂರು ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗಲಿದೆ. ಶಿವಮೊಗ್ಗ ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ ಹಾಗೂ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.