Shivamogga Railway Police : ಶಿವಮೊಗ್ಗ: ರೈಲುಗಳಲ್ಲಿ ಪಟಾಕಿ ಸಾಗಾಟವನ್ನು ಕಡ್ಡಾಯವಾಗಿ ನಿಷೇಧಿಸಿದ್ದರೂ ಸಹ, ನಿಯಮಗಳನ್ನು ಉಲ್ಲಂಘಿಸಿ ಪಟಾಕಿ ಬಾಕ್ಸ್‌ಗಳನ್ನು ಸಾಗಿಸುತ್ತಿದ್ದ ನಾಲ್ವರ ವಿರುದ್ಧ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡಿರುವ ಪಟಾಕಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಆಪರೇಷನ್ ಸಂರಕ್ಷ (Operation Sanraksh) ಎಂಬ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡ ರೈಲ್ವೆ ಪೊಲೀಸರು, ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಪ್ರತ್ಯೇಕ ತಪಾಸಣೆ ನಡೆಸುತ್ತಿದ್ದಾಗ ಪಟಾಕಿಗಳ ಬಾಕ್ಸ್‌ಗಳ ಸಮೇತ ಈ ನಾಲ್ವರನ್ನು ವಶಕ್ಕೆ ಪಡೆದರು.
ರೈಲ್ವೆ ಇಲಾಖೆಯು ರೈಲು ಪ್ರಯಾಣದ ಸಮಯದಲ್ಲಿ ಪಟಾಕಿಗಳನ್ನು ಒಯ್ಯುವುದನ್ನು ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಈ ನಿಷೇಧದ ನಡುವೆಯೂ, ಆರೋಪಿಗಳು ಪಟಾಕಿಗಳನ್ನು ತಂದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಪಟಾಕಿ ದಾಸ್ತಾನನ್ನು ವಶಪಡಿಸಿಕೊಂಡು, ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಮತ್ತು ರೈಲ್ವೆ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ನಾಲ್ವರು ವ್ಯಕ್ತಿಗಳು ಪ್ರಸ್ತುತ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

