Shikaripura accident : ತಡೆಗೋಡೆಗೆ ಕಾರು ಡಿಕ್ಕಿ; ಇಬ್ಬರು ಸಹೋದರರು ಸಾವು, ಚಾಲಕನಿಗೆ ಗಾಯ
ಶಿಕಾರಿಪುರ: ಪಟ್ಟಣದ ಹೊರವಲಯದ ಕೊಟ್ಟ ಕ್ರಾಸ್ ಬಳಿ ರಸ್ತೆ ಬದಿಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಬಳ್ಳಿಗಾವಿ ಗ್ರಾಮದವರಾದ ಜೈನುಲ್ಲಾ ಬಿನ್ ಇಬ್ರಾಹಿಂ (26) ಮತ್ತು ಕೋಯಲ್ (18) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಚಾಲಕ ಅಭಿಷೇಕ್ (24) ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂವರೂ ತಾಲ್ಲೂಕಿನ ಬಳ್ಳಿಗಾವಿ ಗ್ರಾಮದ ನಿವಾಸಿಗಳು. ಕೆಲಸದ ನಿಮಿತ್ತ ಬಾಣಾವರಕ್ಕೆ ತೆರಳಿದ್ದ ಇವರು, ವಾಪಸಾಗುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿದೆ.ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

