Railway technical inspection ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ರೈಲು ಮಾರ್ಗದ ನಡುವೆ ಬರುವ ಮೂರು ಲೆವೆಲ್ ಕ್ರಾಸಿಂಗ್ ಗೇಟ್‌ಗಳ (LC Gates) ತಾಂತ್ರಿಕ ಪರಿಶೀಲನೆ ಮತ್ತು ಕಾಮಗಾರಿ ನಡೆಸಲು, ಅಕ್ಟೋಬರ್ 28 ರಿಂದ ನವೆಂಬರ್ 3 ರವರೆಗೆ ವಿವಿಧ ದಿನಾಂಕಗಳಲ್ಲಿ ಆಯಾ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಸಮಯದಲ್ಲಿ ವಾಹನಗಳು ಮತ್ತು ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳಾದ ಎಲ್‌ಸಿ ನಂ: 42, 46, ಮತ್ತು 47 ಗಳನ್ನು ಎಲ್‌ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಮುಚ್ಚಲಾಗುತ್ತಿದ್ದು, ಈ ಕುರಿತು ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 115ರ ಅನ್ವಯ ತಾತ್ಕಾಲಿಕ ಆದೇಶ ನೀಡಲಾಗಿದೆ.
Railway technical inspection ಬದಲಿ ಮಾರ್ಗಗಳ ವಿವರ
ಎಲ್‌ಸಿ 43 (ಯಲವಟ್ಟಿ ರಸ್ತೆ): ಅಕ್ಟೋಬರ್ 28 ರ ಬೆಳಿಗ್ಗೆ 8 ರಿಂದ ಅಕ್ಟೋಬರ್ 29 ರ ಸಂಜೆ 6 ರವರೆಗೆ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ ಇರಲಿದೆ. ಈ ಅವಧಿಯಲ್ಲಿ ವಾಹನಗಳು ಎಲ್‌ಸಿ 46 ಮುಖಾಂತರ – ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕದ ಬದಲಿ ಮಾರ್ಗದಲ್ಲಿ ಸಂಚರಿಸಬೇಕು.
ಎಲ್‌ಸಿ 46 (ಚಿತ್ರದುರ್ಗ ರಸ್ತೆ): ಅಕ್ಟೋಬರ್ 30 ರ ಬೆಳಿಗ್ಗೆ 8 ರಿಂದ ಅಕ್ಟೋಬರ್ 31 ರ ಸಂಜೆ 6 ರವರೆಗೆ ಈ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶವಿರುವುದಿಲ್ಲ. ವಾಹನ ಸವಾರರು ಹೊಸದಾಗಿ ನಿರ್ಮಿಸಲಾದ ಮೇಲ್ಸೇತುವೆಯ (ಓವರ್‌ಬ್ರಿಡ್ಜ್) ಚಿತ್ರದುರ್ಗ ಸಂಪರ್ಕ ರಸ್ತೆ ಮಾರ್ಗವನ್ನು ಬಳಸಬಹುದು.
ಎಲ್‌ಸಿ 47 (ಮಲ್ಲೇಶ್ವರ ನಗರ ರಸ್ತೆ): ನವೆಂಬರ್ 2 ರ ಬೆಳಿಗ್ಗೆ 8 ರಿಂದ ನವೆಂಬರ್ 3 ರ ಸಂಜೆ 6 ರವರೆಗೆ ಸಂಚಾರ ನಿಷೇಧಿಸಲಾಗಿದೆ. ಬದಲಿ ಮಾರ್ಗವಾಗಿ ಮಲ್ಲೇಶ್ವರ ನಗರ ರಸ್ತೆ-ಹೊನ್ನಾಳಿ ರಸ್ತೆ- ಸಂಗೊಳ್ಳಿ ರಾಯಣ್ಣ ಸರ್ಕಲ್ -ಶಂಕರಮಠ ಸಂಪರ್ಕ ಎಲ್‌ಸಿ 47 ರ ಮಾರ್ಗವಿರುತ್ತದೆ.
Railway technical inspection ಭಾರಿ ವಾಹನಗಳಿಗೆ ನಿರ್ಬಂಧ
ಎಲ್‌ಸಿ 47ಕ್ಕೆ ಸಂಬಂಧಿಸಿದ ಬದಲಿ ಮಾರ್ಗವಾದ ಮಲ್ಲೇಶ್ವರ ನಗರ ರಸ್ತೆಯು ಕಚ್ಚಾ ಮಣ್ಣಿನ ರಸ್ತೆಯಾಗಿರುವುದರಿಂದ, ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿಗದಿಪಡಿಸಿದ ದಿನಾಂಕಗಳಂದು ಮಾತ್ರ ವಾಹನ ಸವಾರರು ಈ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

