Press Freedom : ಮಾಧ್ಯಮಗಳು ಧರ್ಮಗುರುಗಳ ಆಯುಧವಾಗಿ ಪರಿಣಮಿಸಿವೆ: ದಿನೇಶ್ ಅಮೀನ್‌ಮಟ್ಟು ಕಳವಳ
Press Freedom : ಶಿವಮೊಗ್ಗ : ಪತ್ರಕರ್ತರು ಹಬ್ಬ ಹರಿದಿನಗಳಲ್ಲಿ ಹೆಚ್ಚು ಕಾರ್ಯನಿರತರಾಗಿದ್ದರೂ ಸಮಾಜ ಇದನ್ನು ಕಡಿಮೆ ಅರ್ಥಮಾಡಿಕೊಳ್ಳುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು. ಮಾಧ್ಯಮ ಕ್ಷೇತ್ರದ ದೊಡ್ಡ ಶತ್ರುಗಳು ರಾಜಕಾರಣಿಗಳಲ್ಲ, ಬದಲಾಗಿ ಧರ್ಮಗುರುಗಳು. ಇಂದು ಮಾಧ್ಯಮವು ಧರ್ಮಗುರುಗಳ ಆಯುಧವಾಗಿ ಪರಿಣಮಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಧ್ಯಮವು ನಿಜವಾದ ಉದ್ಯಮವಾಗಬೇಕು, ಆದರೆ ಅದು ಕೆಲವರಿಗೆ ಮಾತ್ರ ಉದ್ಯಮವಾಗಿದೆ. ಪತ್ರಿಕೆಗಳು ಒಮ್ಮೆ ವಿಶ್ವಾಸ ಕಳೆದುಕೊಂಡರೆ, ಜನರು ಕಾಲಕ್ರಮೇಣ ಅವುಗಳನ್ನು ನಂಬುವುದಿಲ್ಲ ಎಂದು ಅಮೀನ್‌ಮಟ್ಟು ತಿಳಿಸಿದರು.
Press Freedom : ಓದುಗರ ಹಣದಿಂದ ಪತ್ರಿಕೆ ನಡೆಸುವುದು ಸಾಧ್ಯವಿಲ್ಲ. ಮಾಧ್ಯಮದ ಮಾದರಿಯಲ್ಲೇ ತಪ್ಪು ಇದೆ. ಮೊದಲೆಲ್ಲ ಓದುಗರಿಗೆ ಧ್ವನಿ ಇರಲಿಲ್ಲ, ಆದರೆ ಈಗ ಓದುಗನಿಗೆ ಧ್ವನಿ ಇದೆ. ಎಷ್ಟೋ ವೈರಲ್ ಪೋಸ್ಟ್‌ಗಳಿಂದ ಒಳ್ಳೆಯದೂ ಸಹ ಆಗಿದೆ. ಜಗತ್ತಿನ ಜ್ಞಾನ ಬೆರಳ ತುದಿಯಲ್ಲಿದ್ದರೂ, ಬೆಳಗ್ಗೆ ಪತ್ರಿಕೆ ಓದಿದರೆ ಸಮಾಧಾನ ಎಂದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ದೇಶದ ಸ್ವಾತಂತ್ರ್ಯ, ಸಂವಿಧಾನ, ಇತಿಹಾಸಗಳ ಕುರಿತು ಸಮಾಜವನ್ನು ಎಚ್ಚರಿಸುವ, ತಿಳಿಸುವ ಕೆಲಸವನ್ನು ಪತ್ರಕರ್ತರು ದಿಟ್ಟವಾಗಿ ಮಾಡುತ್ತಿದ್ದಾರೆ. ಲೇಖನಿಯ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
Press Freedom : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನ ಆಗಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ‘ಅಪತ್ವಾಂಧವ’ ಮೂಲಕ ಪ್ರತಿ ತಿಂಗಳು ೫೦ ಸಾವಿರ ರೂ. ಸಂಗ್ರಹವಾಗುತ್ತಿದೆ. ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಒಂದು ಕೋಟಿ ರೂ. ಕ್ರೋಡೀಕರಣಗೊಂಡಿದ್ದು, ಇದನ್ನು ಪತ್ರಕರ್ತರ ಅನಾರೋಗ್ಯದ ಸಂದರ್ಭದಲ್ಲಿ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಶ್ರೀನಿವಾಸಮೂರ್ತಿ, ಜಿ.ಟಿ. ಸತೀಶ್, ರವಿ ಬಿದನೂರು, ಉಮೇಶ್, ಚಂದ್ರಶೇಖರ್ ಶೃಂಗೇರಿ, ಎಚ್.ಯು. ವೈದ್ಯನಾಥ್, ದೇಶಾದ್ರಿ ಹೊಸಮನೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ. ಶಿವಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಪ್ರಮುಖರಾದ ಭಂಡಿಗಡಿ ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.