ರಸಭರಿತ ಗೇರುಹಣ್ಣನ್ನು ಹೆಚ್ಚಾಗಿ ಗೋಡಂಬಿ ತಯಾರಿಕೆಗಾಗಿ ಬೆಳೆಸಲಾಗುತ್ತದೆ. ಕೆಲವರು ಆ ಹಣ್ಣಿನಿಂದ ಕಳಬಟ್ಟಿಯನ್ನು ತಯಾರಿಸಿದರೆ, ಇನ್ನು ಕೆಲವರು ಆ ಹಣ್ಣಿನ ಬೀಜವನ್ನು ತೆಗೆದು ಹಣ್ಣನ್ನು ವ್ಯರ್ಥಮಾಡುತ್ತಾರೆ. ಆದರೆ ಇದೀಗ ಹಣ್ಣಿನ ಮೇಲೆ ಹೊಸ ಸಂಶೋಧನೆಯೊಂದು ಹೊರಬಿದ್ದಿದೆ. ಅದೇನೆಂದರೆ ಗೇರು ಹಣ್ಣಿನಲ್ಲಿ ಲಿಕ್ವಿಡ್ ಬೆಲ್ಲ ತಯಾರಿಸುವುದನ್ನು ಸಂಶೋದರೊಬ್ಬರು ಕಂಡು ಹಿಡಿದಿದ್ದಾರೆ.
ಹೌದುಐ.ಸಿ.ಎ.ಆರ್-ಗೋಡಂಬಿ ಸಂಶೋಧನಾ ನಿರ್ದೇಶನಾಲಯದ ಆಹಾರ ತಂತ್ರಜ್ಞಾನ ವಿಜ್ಞಾನಿ ಜ್ಯೋತಿ ನಿಷಾದ್ ಅವರು ಗೋಡಂಬಿ ಹಣ್ಣಿನಿಂದ ಲಿಕ್ವಿಡ್ ಬೆಲ್ಲವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಹಲವು ಗುಣಗಳನ್ನು ಹೊಂದಿದ್ದು, ಹೆಚ್ಚಿನ ಪೊಟ್ಯಾಸಿಯಮ್, ಸತು, ಕಬ್ಬಿಣದಂತಹ ಖನಿಜಾಂಶಗಳನ್ನು ಮತ್ತು ಅಧಿಕ ಪ್ರಮಾಣದ ಕರಗುವ ನಾರಿನಂಶವನ್ನು ಒಳಗೊಂಡಿದೆ. ಇದನ್ನು ಜೇನುತುಪ್ಪದ ಬದಲಿಗೆ ಬಳಸಬಹುದು. ಇದರ ವಿಶಿಷ್ಟವಾದ ಸಕ್ಕರೆ ಅಂಶವು ಬೇಕರಿ ಮತ್ತು ಮಿಠಾಯಿ ಉದ್ಯಮಗಳಲ್ಲಿ ಬಳಸಲು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ಮಧ್ಯಮ ವರ್ಗದಲ್ಲಿದ್ದು, ಆರೋಗ್ಯಕರ ಸಿಹಿಕಾರಕಗಳನ್ನು ಬಯಸುವವರಿಗೆ ಇದು ಒಂದು ಉತ್ತಮ ಪರ್ಯಾಯವಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ ಹೀಗೆ ಸಂಸ್ಕರಿಸಿದ ಲಿಕ್ವಿಡ್ ಬೆಲ್ಲವನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಉಳಿಸಿಕೊಳ್ಳಬಹುದು ಎನ್ನಲಾಗಿದೆ. ಸದ್ಯ ಗೇರುಹಣ್ಣಿನಿಂದ ಲಿಕ್ವಿಡ್ ಬೆಲ್ಲ ತಯಾರಿಸುವ ರೀತಿಗೆ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಈ ತಂತ್ರಜ್ಞಾನವು ಬಳಸಲು ಸುಲಭವಾಗಿರುವುದರಿಂದ ಮುಂದೆ ಸಣ್ಣ ಮಾರುಕಟ್ಟೆಯಲ್ಲಿ ದೊಡ್ಡಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.ಗೇರು ಹಣ್ಣಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸುವ ಮೂಲಕ ರೈತರಿಗೆ ಹೆಚ್ಚುವರಿ ಆದಾಯ ಮತ್ತು ಆಹಾರ ಉದ್ಯಮಕ್ಕೆ ಹೊಸ ಅವಕಾಶಗಳನ್ನು ಒದಗಿಸಲು ನಿರ್ದೇಶನಾಲಯವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. “ಗೋಡಂಬಿ ಹಣ್ಣಿನಿಂದ ಲಿಕ್ವಿಡ್ ಸಿಹಿಕಾರಕವನ್ನು ಅಭಿವೃದ್ಧಿಪಡಿಸಿರುವುದು ಈ ಕ್ಷೇತ್ರದಲ್ಲಿ ಒಂದು ಮಹತ್ವದ ಆವಿಷ್ಕಾರವಾಗಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಯತ್ನವಾಗಿರಬಹುದು” ಎಂದು ಐ.ಸಿ.ಎ.ಆರ್-ಡಿ.ಸಿ.ಆರ್ ಹೇಳಿಕೊಂಡಿದೆ.